ಆಯುಕ್ತ ಜ್ಞಾನೇಶ್‌ ಕುಮಾರ ಪದಚ್ಯುತಿಗೊಳಿಸಿ: ನಟ ಪ್ರಕಾಶ್‌ ರಾಜ್‌

KannadaprabhaNewsNetwork |  
Published : Sep 25, 2026, 02:30 AM IST
ಫೋಟೋವಿವರ- (24ಎಚ್‌ಪಿಟಿ2)ಹೊಸಪೇಟೆ ನಗರದ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಎಸ್.ಐ.ಆರ್. ಪ್ರಕ್ರಿಯೆ ವಿರೋಧಿಸಿ ನಡೆಸಿದ ಸಭೆಯಲ್ಲಿ ನಟ ಪ್ರಕಾಶ್‌ ರಾಜ್‌ ಮಾತನಾಡಿದರು | Kannada Prabha

ಸಾರಾಂಶ

ಎಸ್‌ಐಆರ್‌ ಪ್ರಕ್ರಿಯೆ ನಡೆಸಿರುವುದೇ ತಪ್ಪು. ಇದು ಎಲ್ಲರನ್ನು ಒಳಗೊಂಡಿಲ್ಲ. ಮತದಾರರ ಪಟ್ಟಿಯಲ್ಲಿ ಬದುಕಿದವರನ್ನು ಬಿಟ್ಟು ಸತ್ತವರನ್ನು ಸೇರಿಸಿದ್ದಾರೆ.

ಹೊಸಪೇಟೆ: ಎಸ್‌ಐಆರ್‌ ಪ್ರಕ್ರಿಯೆ ರದ್ದು ಪಡಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರನ್ನು ತಕ್ಷಣವೇ ಪದಚ್ಯುತಿಗೊಳಿಸಿ ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ನಟ ಪ್ರಕಾಶ್‌ ರಾಜ್‌ ಆಗ್ರಹಿಸಿದರು.

ನಗರದ ಅಕ್ಕಮಹಾದೇವಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ ನಡೆಸಿದ ಸಭೆಯಲ್ಲಿ ಮಾತನಾಡಿದರು.

ಎಸ್‌ಐಆರ್‌ ಪ್ರಕ್ರಿಯೆ ನಡೆಸಿರುವುದೇ ತಪ್ಪು. ಇದು ಎಲ್ಲರನ್ನು ಒಳಗೊಂಡಿಲ್ಲ. ಮತದಾರರ ಪಟ್ಟಿಯಲ್ಲಿ ಬದುಕಿದವರನ್ನು ಬಿಟ್ಟು ಸತ್ತವರನ್ನು ಸೇರಿಸಿದ್ದಾರೆ. ಅವರನ್ನು ಫಾರಂ ನಂ. 6 ತುಂಬಿ ಹೊಸ ಪಟ್ಟಿ ಮಾಡಿಸಿ ಎಂದು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ದೆಹಲಿ, ಹರಿಯಾಣ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಬೇರೆ, ಬೇರೆ ರಾಜ್ಯಗಳಲ್ಲಿ ಮಾಡಿದ ಹಾಗೇ ಎಲ್ಲ ಕಡೆ ಗೆಲ್ಲುವುದಕ್ಕಾಗಿ ಎಸ್‌ಐಆರ್ ಮಾಡಲಾಗುತ್ತಿದೆ. ಇದರ ಹಿಂದೆ ಜ್ಞಾನೇಶ್ ಕುಮಾರ್ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಎಸ್‌ಐಆರ್‌ ಹೋರಾಟ ಹೊಸ ಸ್ವರೂಪ ಪಡೆಯುತ್ತಿದೆ. ನಿಮ್ಮ ಬೂತ್‌ಗಳಲ್ಲಿನ ಸಮಸ್ಯೆ ವೀಡಿಯೋ ಮಾಡಿ ಕಳುಹಿಸಿ, ಬೆಂಗಳೂರಿಗೆ ಬಂದು ಹೋರಾಟ ಮಾಡುವ ಅಗತ್ಯವಿಲ್ಲ. ನಿಮ್ಮ ನಿಮ್ಮ ಬೂತ್‌ಗಳಲ್ಲಿ ಕಂಡು ಬರುವ ಅನ್ಯಾಯ ಹಾಗೂ ಸಮಸ್ಯೆ ಮೊಬೈಲ್‌ ಫೋನ್‌ನಲ್ಲಿ ವೀಡಿಯೋ ಮಾಡಿ, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಸ್ಥಳೀಯ ಪತ್ರಿಕೆ ಹಾಗೂ ತಮ್ಮ ತಂಡಕ್ಕೆ ಕಳುಹಿಸಿಕೊಡಿ. ಈ ಮೂಲಕ ಸ್ಥಳೀಯ ಮಟ್ಟದಲ್ಲಿ ಲಭ್ಯವಾಗುವ ಸಾಕ್ಷ್ಯಗಳನ್ನು ಸಂಗ್ರಹಿಸಿ ಮುಂದಿನ ಹೋರಾಟಕ್ಕೆಅಣಿಯಾಗುತ್ತೇವೆ ಎಂದರು.

ಸೆ.30 ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕರ್ನಾಟಕದ 100 ಬೂತ್‌ಗಳ ಪರಿಶೋಧನೆ ಮತ್ತು ತನಿಖಾ ವರದಿಯನ್ನು ಸಾಕ್ಷ್ಯಾಧಾರಗಳೊಂದಿಗೆ ಜನರ ಮುಂದಿಡಲಾಗುವುದು. ಅಂದು ಮಧ್ಯಾಹ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದೆ ಸಾಕ್ಷ್ಯಗಳನ್ನು ಮಂಡಿಸಿ ಸಾಮಾಜಿಕ ತನಿಖೆ (ಸೋಷಿಯಲ್ ಆಡಿಟ್) ನಡೆಸುವಂತೆ ಒತ್ತಾಯಿಸಲಾಗುವುದು ಎಂದರು.

ಅ.1ರಂದು ದೆಹಲಿ, ಜಾರ್ಖಂಡ್, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ತಂಡಗಳೊಂದಿಗೆ ರಾಷ್ಟ್ರಮಟ್ಟದ ಪತ್ರಿಕಾಗೋಷ್ಠಿ ನಡೆಸಲಾಗುವುದು. 3ರಂದು ವಕೀಲರ ತಂಡದ ಮೂಲಕ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅ.15ರಂದು ದೆಹಲಿಯ ಜಂತರ್ ಮಂಥರ್‌ನಲ್ಲಿ ವಿರೋಧ ಪಕ್ಷದ ಸಂಸದರು, ರೈತರು ಮತ್ತು ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಒಕ್ಕೂಟಗಳನ್ನು ಒಳಗೊಂಡ ಬೃಹತ್ ಹೋರಾಟ ನಡೆಸಲಾಗುತ್ತದೆ.

ಸಂತ್ರಸ್ತರು ಹಾಗೂ ಸಾಮಾನ್ಯ ಜನರು ಇನ್ನು ಮುಂದೆ ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ. ಧ್ವನಿ ಇಲ್ಲದವರ ಪರ ನಿಮ್ಮ ಧ್ವನಿಯಾಗಿ ನಾವು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೆ.ಎಂ.ವೀರಸಂಗಯ್ಯ, ಸೋಮಶೇಖರ್‌ ಬಣ್ಣದಮನೆ, ಕುಮಾರ್‌ ತಮ್ಮತಳ್‌, ಪಿ.ಪೀರ್ ಭಾಷ, ಮರಡಿ ಜಂಬಯ್ಯನಾಯಕ, ಕರಿಯಪ್ಪ ಗುಡಿಮನಿ, ವಾಸುದೇವ್‌ ಸೇರಿದಂತೆ ಪ್ರಗತಿಪರ ಚಿಂತಕರು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಚ್ಚಿಲ: ಇಂದು ಶ್ರೀಮಾಧವ ಮಂಗಲರ ಪುತ್ಥಳಿ ಅನಾವರಣ
ನವದೆಹಲಿ: ಪೇಜಾವರ ಶ್ರೀ-ಹೊಸಬಾಳೆ ಭೇಟಿ