ಕನ್ನಡಪ್ರಭ ವಾರ್ತೆ, ದಾವಣಗೆರೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಹೂರಣ ಬಗೆದಷ್ಟು ಹೊರ ಬರುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಡಳಿತ ಹೇರಿ, ಇಡೀ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಲು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ, ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ರಾಜ್ಯಪಾಲರಿಗೆ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ 14 ಸಲ ರಾಜ್ಯದ ಬಜೆಟ್ ಮಂಡಿಸಿದ್ದಾರೆ. ಸ್ವತಃ ಸಿದ್ದರಾಮಯ್ಯ ಹಣಕಾಸು ಖಾತೆಯನ್ನು ಹೊಂದಿದ್ದು, ಇದು ಸಿಎಂ ಗಮನಕ್ಕೆ ಬರದೇ ನಡೆದಿಲ್ಲ ವೆಂಬ ಗುಸುಗುಸು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದರೆ ರಾಜ್ಯ ಸರ್ಕಾರವನ್ನು ವಜಾಗ ಮಾಡಿ, ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು. ನಿಗಮದ ಬಹುಕೋಟಿ ಹಗರಣದ ತನಿಖೆಯನ್ನು ಸಿಬಿಐ ತನಿಖೆಗೆ ಒಪ್ಪಿಸಿ, ಸತ್ಯಾಸತ್ಯತೆ ಬಯಲಿಗೆ ಎಳೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಹೆಜ್ಜೆ ಹೆಜ್ಜೆಗೂ ಅಹಿಂದ ಹಿತ ಮಂತ್ರವನ್ನು ಜಪಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಾನ್ ಋಷಿ ಕವಿ ಮಹರ್ಷಿ ವಾಲ್ಮೀಕಿಯವರ ಹೆಸರಿನಲ್ಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಬಳಕೆ ಮಾಡಬೇಕಾದ ಹಣವನ್ನು ಕೊಳೆ ಹೊಡೆದಿರುವುದು ತೀರಾ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಸಿದ್ದರಾಮಯ್ಯ ಸರ್ಕಾರದ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಬಗ್ಗೆ ಅವರು ಅಸಮಾಧಾನ ಹೊರ ಹಾಕಿದ್ದಾರೆ.