- ಯಕ್ಷಗಾನಕ್ಕೆ ಪುರುಷೋತ್ತಮ ಬಿಳಿಮಲೆ ಅವಮಾನ: ಪ್ರಭಾಕರ ಶೆಟ್ಟಿ ಆರೋಪ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ, ನ.20ಯಕ್ಷಗಾನ ಕಲಾವಿದರ ಬಗ್ಗೆ ಅವಮಾನಕರವಾಗಿ ಮಾತನಾಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮನೆ ಅವರನ್ನು ತಕ್ಷಣ ಪ್ರಾಧಿಕಾರ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಯಕ್ಷರಂಗ ಯಕ್ಷಗಾನ ಸಂಸ್ಥೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ, ದೈವೀಕಲೆಯಾದ ಯಕ್ಷಗಾನವನ್ನು ದೇವರ ಪೂಜೆಯಂತೆ ಆರಾಧಿಸುವ ಯಕ್ಷಗಾನ ಕಲಾವಿದರಲ್ಲಿ ಅನೇಕಲು ಸಲಿಂಗಕಾಮಿಗಳೆಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಆ ಮೂಲಕ ಪ್ರೊ.ಪುರುಷೋತ್ತಮ ಬಿಳಿಮಲೆ ಯಕ್ಷಗಾನ ಕಲಾವಿದರನ್ನು ಅವಮಾನಿಸಿದ್ದಾರೆ ಎಂದರು.
ಕರಾವಳಿ ಜಿಲ್ಲೆಯ ಪ್ರಾಚೀನ ಕಲೆ ಯಕ್ಷಗಾನವನ್ನು ಅವಮಾನಿಸಿದ್ದು ಅಕ್ಷಮ್ಯ. ಯಕ್ಷರಂಗ ಯಕ್ಷಗಾನ ಸಂಸ್ಥೆ ಸೇರಿದಂತೆ ರಾಜ್ಯಾದ್ಯಂತ ಯಕ್ಷಗಾನಪ್ರಿಯರು, ಸಂಘ-ಸಂಸ್ಥೆಗಳು, ಕರಾವಳಿ ಜಿಲ್ಲೆಯ ಜನರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ದಾವಣಗೆರೆಯಲ್ಲೂ ಬಿಳಿಮಲೆ ವಿರುದ್ಧ ದೂರು ದಾಖಲು ಮಾಡಲಿದ್ದೇವೆ ಎಂದು ಎಚ್ಚರಿಸಿದರು.ಮಳೆಗಾಲದ ರಜಾದಿನಗಳನ್ನು ಕಳೆದು ಯಕ್ಷಗಾನ ತಿರುಗಾಟಕ್ಕೆ ಸಜ್ಜಾಗಿರುವ ವೃತ್ತಿಮೇಳಗಳು ಹುರುಪಿನಿಂದ ಇರುವಾಗಲೇ ಇಡೀ ಯಕ್ಷಗಾನ ಕಲೆ, ಯಕ್ಷಗಾನ ಕಲಾವಿದರಿಗೆ ಅವಮಾನಿಸುವ ಮೂಲಕ ಮುಜುಗರಕ್ಕೀಡು ಮಾಡುವ ಕೆಲಸ ಬಿಳಿಮಲೆ ಮಾಡಿದ್ದಾರೆ. ಯಕ್ಷಗಾನ ಕಲಾವಿದರ ಆತ್ಮಸ್ಥೈರ್ಯ ಕುಗ್ಗಿಸುವ ಹುನ್ನಾರ ಇದಾಗಿದೆ. ಪುರುಷೋತ್ತಮ ಬಿಳಿಮಲೆ ಹೇಳಿಕೆಯಿಂದ ಯಕ್ಷಗಾನ ಕಲಾವಿದರು, ಅಭಿಮಾನಿಗಳು, ಸಂಘಟಕರಿಗೂ ತೀವ್ರ ನೋವಾಗಿದೆ ಎಂದು ಹೇಳಿದರು.
ಕರಾವಳಿ ಜಿಲ್ಲೆಯ ಯಕ್ಷಗಾನ ಬಗ್ಗೆ ಸಾಮಾನ್ಯ ಜ್ಞಾನವೂ ಇಲ್ಲದ, ಕಲಾವಿದರ ಕಲೆ ಮಹತ್ವ ಅರಿಯದ ಪುರುಷೋತ್ತಮ ಬಿಳಿಮಲೆಯಂತಹ ವ್ಯಕ್ತಿಯು ಪ್ರಾಧಿಕಾರ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಯಾವುದೇ ನೈತಿಕತೆ ಇಲ್ಲ. ಇಂತಹ ವ್ಯಕ್ತಿಯನ್ನು ತಕ್ಷಣವೇ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಿ, ಬಿಳಿಮಲೆ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಯಕ್ಷಗಾನಕ್ಕೆ ಅಪಚಾರ ಮಾಡಿದ ಬಿಳಿಮಲೆ ಬೇಷರತ್ ಕ್ಷಮೆಯಾಚಿಸಬೇಕು ಎಂದು ಮಲ್ಯಾಡಿ ಪ್ರಭಾಕರ ಶೆಟ್ಟಿ ತಾಕೀತು ಮಾಡಿದರು.ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ, ಬೇಳೂರು ಸಂತೋಷಕುಮಾರ ಶೆಟ್ಟಿ, ಶಾಂತಪ್ಪ ಪೂಜಾರ, ಕಲಾಕುಂಚ ಅಧ್ಯಕ್ಷ ಕೆ.ಎಚ್.ಮಂಜುನಾಥ, ಹೇಮಾವತಿ ಶಾಂತಪ್ಪ ಪೂಜಾರ, ಯಕ್ಷಗಾನ ಕಲಾವಿದರಾದ ಕೆ.ರಾಘವೇಂದ್ರ ನಾಯರಿ, ಆನಂದ ಶೆಟ್ಟಿ ಹಟ್ಟಿಯಂಗಡಿ ಇತರರು ಇದ್ದರು.
- - - -20ಕೆಡಿವಿಜಿ2: ದಾವಣಗೆರೆಯಲ್ಲಿ ಗುರುವಾರ ಯಕ್ಷರಂಗ ಯಕ್ಷಗಾನ ಸಂಸ್ಥೆ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.