ಶಿವಮೊಗ್ಗ: ನಗರದ ಕರ್ನಾಟಕ ಸಂಘದ ಪುಸ್ತಕ ಬಹುಮಾನ-2024 ಹಾಗೂ 95ನೇ ವರ್ಷದ ವಾರ್ಷಿಕೋತ್ಸವ ಹಾಗೂ ಛಾಯಾಚಿತ್ರ ಮತ್ತು ನಾಣ್ಯ ಪ್ರದರ್ಶನವನ್ನು ಕ್ರಮವಾಗಿ ನ.22 ಹಾಗೂ ನ.23ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರೊ.ಎಚ್.ಆರ್.ಶಂಕರನಾರಾಯಣ ಶಾಸ್ತ್ರೀ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಸ್ತಕ ಬಹುಮಾನ 2025ನ್ನು ನ.22 ರಂದು ಸಂಜೆ 5.30ಕ್ಕೆ ಬಿ.ಎಚ್ ರಸ್ತೆಯಲ್ಲಿರುವ ಸಂಘದ ಹೊಸೂಡಿ ವೆಂಕಟಶಾಸ್ತ್ರೀ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ. 2024ರಲ್ಲಿ ಪ್ರಕಟವಾದ 12 ವಿವಿಧ ಪ್ರಕಾರದ ಕೃತಿಗಳನ್ನು ಪುಸ್ತಕ ಬಹುಮಾನಕ್ಕೆ ಆಹ್ವಾನಿಸಲಾಗಿತ್ತು. ಕುವೆಂಪು (ಕಾದಂಬರಿ) ಪ್ರಕಾರದಲ್ಲಿ ಸಿರಿಮೂರ್ತಿ ಕಾಸರವಳ್ಳಿ ಅವರ ಶಾಂತಿಧಾಮ ಕೃತಿ, ಎಸ್.ವಿ.ಪರಮೇಶ್ವರ ಭಟ್ಟ (ಅನುವಾದ) ಪ್ರಕಾರಕ್ಕೆ ನಟರಾಜ ಹೊನ್ನವಳ್ಳಿ ಅವರ ಆಲಯ ಈಲಯ, ಎಂ.ಕೆ.ಇಂದಿರಾ (ಮಹಿಳಾ ಲೇಖಕರು) ಪ್ರಕಾರಕ್ಕೆ ಶ್ರೀಮತಿ ಪ್ರತಿಭಾರಾವ್ ಅವರ ಜೀವನ್ಮುಖಿ, ಪಿ.ಲಂಕೇಶ್ (ಮುಸ್ಲಿಂ ಲೇಖಕರು) ಪ್ರಕಾರಕ್ಕೆ ಸಂತೆಬೆನ್ನೂರು ಪೈಜ್ಞಟ್ರಾಜ್ ಅವರ ಹೊಸ್ತಿಲು ದಾಟಿಬಂದ ಬಿಕ್ಕು, ಜಿ.ಎಸ್.ಶಿವರುದ್ರಪ್ಪ (ಕವನ ಸಂಕಲನ) ಪ್ರಕಾರಕ್ಕೆ ಶ್ರೀಮತಿ ಭವ್ಯ ಕಬ್ಬಳಿ ಅವರ ದೇವರ ತೇರಿಗೂ ಗಾಲಿಗಳು ಬೇಕು, ಹಾ.ಮ. ನಾಯಕ್ (ಅಂಕಣ ಬರಹ) ಪ್ರಕಾರಕ್ಕೆ ಪ್ರೊ.ಎ.ಎಸ್.ಬಾಲಸುಬ್ರಹ್ಮಣ್ಯ ಅವರ ಪತ್ರಿಕೋದ್ಯಮದ ಪಲ್ಲಟಗಳು, ಯು.ಆರ್.ಅನಂತಮೂರ್ತಿ (ಸಣ್ಣಕಥಾ ಸಂಕಲನ) ಪ್ರಕಾರಕ್ಕೆ ಮಹಾಂತೇಶ್ ನವಲಕಲ್ ಅವರ ಬುದ್ಧ ಗಂಟೆಯ ಸದ್ದು, ಕೆ.ವಿ.ಸುಬ್ಬಣ್ಣ (ನಾಟಕ) ಪ್ರಕಾರಕ್ಕೆ ಕೆ.ವೈ.ನಾರಾಯಣ ಸ್ವಾಮಿ, ಅವರ ನೀವು ಕಾಣಿರೇ ಮತ್ತು ಮಲ್ಲಿಗೆ, ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರೀ (ಪ್ರವಾಸ ಸಾಹಿತ್ಯ) ಪ್ರಕಾರಕ್ಕೆ ಡಾ.ಶೈಲೇಶ್‌ಕುಮಾರ್.ಎಸ್ ಅವರ ಸುಪ್ತ ಸಾಗರದಾಚೆ, ಹಸೂಡಿ ವೆಂಕಟಶಾಸ್ತ್ರೀ (ವಿಜ್ಞಾನ ಸಾಹಿತ್ಯ) ಪ್ರಕಾರಕ್ಕೆ ಪ್ರೊ.ಜಿ.ಎಸ್.ಜೈಪ್ರಕಾಶ್, ಪ್ರೊ.ಆರ್.ವೇಣುಗೋಪಾಲ್ ಅವರ ಪಂಚಭೂತಗಳ ರಾಸಾಯನಿಕ ವೈವಿಧ್ಯ, ನಾ.ಡಿಸೋಜಾ (ಮಕ್ಕಳ ಸಾಹಿತ್ಯ) ಪ್ರಕಾರಕ್ಕೆ ಸತೀಶ್.ಕೆ.ಎಸ್ ಅವರು ಭೈರ ಹಾಗೂ ಎಚ್.ಡಿ.ಚಂದ್ರಪ್ಪಗೌಡ (ವೈದ್ಯ ಸಾಹಿತ್ಯ) ಪ್ರಕಾರಕ್ಕೆ ಡಾ.ಕರವೀರಪ್ರಭು ಕ್ಯಾಲಕೊಂಡ ಅವರ ಮಿಸ್ಸಿಂಗ್ ವುಮೆನ್ ಪುಸ್ತಕಗಳು ಬಹುಮಾನಕ್ಕೆ ಆಯ್ಕೆಯಾಗಿವೆ ಎಂದು ವಿವರಿಸಿದರು.ಪ್ರಶಸ್ತಿ ವಿಜೇತರಿಗೆ ತಲಾ 10 ಸಾವಿರ ರು. ನಗದು ಹಾಗೂ ಫಲಕ ನೀಡಿ, ಗೌರವಿಸಲಾಗುವುದು. ಸಮಾರಂಭದ ಮುಖ್ಯ ಅತಿಥಿಗಳಾಗಿ ಖ್ಯಾತ ರಂಗಭೂಮಿ ಕಲಾವಿದ ಹಾಗೂ ಸಾಹಿತಿ ಎಸ್.ಎನ್.ಸೇತುರಾಮ್ ಅವರು ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮವೂ ಇದೆ ಎಂದು ಮಾಹಿತಿ ನೀಡಿದರು.ನ.23ರಂದು ಹಸೂಡಿ ವೆಂಕಟಶಾಸ್ತ್ರೀ ಸಾಹಿತ್ಯ ಭವನದಲ್ಲಿ ಸಂಜೆ 5.30ಕ್ಕೆ ಕರ್ನಾಟಕ ಸಂಘದ 95ನೇ ವಾರ್ಷಿಕೋತ್ಸವ ಸಮಾರಂಭ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ಖ್ಯಾತ ಭರತನಾಟ್ಯ ಕಲಾವಿದ ಹಾಗೂ ಚಲನಚಿತ್ರ ನಟ ಡಾ.ಶ್ರೀಧರ್ ಆಗಮಿಸಲಿದ್ದಾರೆ. ಅಲ್ಲದೆ ನ.22 ಮತ್ತು 23ರಂದು ಎರಡೂ ದಿನ ಡಾ.ರತ್ನಾಕರ್, ಡಾ.ಪಿ.ಕೆ.ಪೈ ಅವರಿಂದ ಛಾಯಾಚಿತ್ರ ಪ್ರದರ್ಶನ ಹಾಗೂ ವಿನೋದ್‌ಕುಮಾರ್ ಜೈನ್ ಅವರಿಂದ ನಾಣ್ಯಪ್ರದರ್ಶನವಿರುತ್ತದೆ. ಸಂಘದ ಹಿರಿಯ ಸದಸ್ಯರಾದ ಎ.ಜೆ.ರಾಮಚಂದ್ರ, ಎಸ್.ನಾಗರಾಜ್, ಎಸ್.ಎಸ್.ಕೃಷ್ಣಮೂರ್ತಿ, ಎಚ್.ಜಿ.ನಾಗರಾಜ್, ಎಚ್.ಎಸ್.ಶ್ರೀನಿವಾಸಮೂರ್ತಿ, ಸ.ಉಷಾ, ಅರುಣ್ ಅವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.ಸಂಘವು ನೀಡುವ 2025ನೇ ಸಾಲಿನ ಕರ್ನಾಟಕ ಸಂಘ ನವಿಲುಗರಿ ಪ್ರಶಸ್ತಿಯನ್ನು ಖ್ಯಾತ ಕಾದಂಬರಿಕಾರ ಡಾ.ಗಜಾನನ ಶರ್ಮಾ ಅವರಿಗೆ ನೀಡಲಾಗುತ್ತಿದ್ದು, ಪ್ರಶಸ್ತಿಯು 15 ಸಾವಿರ ರು. ನಗದು ಮತ್ತು ಫಲಕಗಳನ್ನು ಒಳಗೊಂಡಿರುತ್ತದೆ. ಈ ಕಾರ್ಯಕ್ರಮವು ನ.28ರಂದು ಸಂಜೆ 5.30ಕ್ಕೆ ಸಂಘದ ಹಸೂಡಿ ವೆಂಕಟಶಾಸ್ತ್ರೀ ಸಭಾಭವನದಲ್ಲಿ ಆಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರೊ.ಎಚ್.ಆರ್.ಶಂಕರನಾರಾಯಣ ಶಾಸ್ತ್ರೀ ವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ವಿನಯ್ ಶಿವಮೊಗ್ಗ, ನಿರ್ದೇಶಕರಾದ ಚಂದ್ರಶೇಖರ್, ಡಾ.ಗುರುದತ್ತ, ವಾಗೀಶ್, ಡಾ.ನಾಗಮಣಿ, ಗೀತಾಂಜಲಿ ಪ್ರಸನ್ನಕುಮಾರ್, ಚೇತನ್, ಹಾಲಸ್ವಾಮಿ ಉಪಸ್ಥಿತರಿದ್ದರು.