ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದನ್ನು ಖಂಡಿಸಿ ಹಾಗೂ ಸಚಿವ ಸಂಪುಟಕ್ಕೆ ಮರು ಸೇರ್ಪಡೆ ಮಾಡುವಂತೆ ಆಗ್ರಹಿಸಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘದವರು ಶುಕ್ರವಾರ ಪ್ರತಿಭಟಿಸಿದರು.ನಗರದ ಪುರಭವನ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದ ಅವರು, ಕೆ.ಎನ್. ರಾಜಣ್ಣ ನಾಯಕ ಜನಾಂಗದ ಪ್ರಭಾವಿ ಮುಖಂಡರು. ನೇರ ನಡೆ-ನುಡಿ, ದಿಟ್ಟ ಹೋರಾಟಗಾರ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿರುವುದು ನಾಯಕ ಜನಾಂಗಕ್ಕೆ ಮಾಡಿರುವ ಘನ ಘೋರ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅವಲೋಕಿಸಿದಾಗ ನಾಯಕ ಜನಾಂಗದ ಬಂಧುಗಳಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿ ರಾಜಕೀಯ ಜೀವನದಿಂದ ಅಧೋಗತಿಗೆ ತಳ್ಳಲು ಷಡ್ಯಂತ್ರ ಮಾಡಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದು ಅವರು ಆರೋಪಿಸಿದರು.ರಾಜಣ್ಣ ಅವರಿಗೆ ಯಾವುದೇ ನೋಟೀಸ್ ಸಹ ನೀಡದೇ ಏಕಾಏಕಿ ಸಂಪುಟದಿಂದ ವಜಾಗೊಳಿಸಿರುವುದು ದೊಡ್ಡ ಅಪಮಾನ. ಬಿ. ನಾಗೇಂದ್ರ, ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ. ದಯಾನಂದ್, ರವಿ ಡಿ. ಚೆನ್ನಣ್ಣನವರ್ ಅವರಿಗೂ ಅನ್ಯಾಯವಾಗಿದೆ ಎಂದು ಅವರು ದೂರಿದರು.ರಾಜಣ್ಣ ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ, ಸ್ವಜನ ಪಕ್ಷಪಾತವಿಲ್ಲ. ಧೀನ- ದಲಿತರ ಹಿಂದುಳಿದ ವರ್ಗದವರ ಧ್ವನಿಯಾಗಿದ್ದರು. ಸಹಕಾರ ಸಚಿವರಾಗಿ ಉತ್ತಮ ಆಡಳಿತ ನೀಡುತ್ತಿದ್ದರು. ಇವರ ಏಳಿಗೆ ಸಹಿಸದೆ ಕುತಂತ್ರ ಮಾಡುತ್ತಿದ್ದಾರೆ. ಮುಂದುವರೆದ ವರ್ಗದ ಮುಖಂಡರು ಪಕ್ಷ ವಿರೋಧಿ ಹೇಳಿಕೆ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಕಿಡಿಕಾರಿದರು.ಆದರೆ, ನಾಯಕ ಸಮುದಾಯದ ರಾಜಣ್ಣ ಅವರನ್ನು ಏಕಾಏಕಿ ವಜಾ ಮಾಡಿರುವುದು ಖಂಡನಿಯ. ಕೂಡಲೇ ರಾಜಣ್ಣ ಅವರನ್ನು ಸಂಪುಟಕ್ಕೆ ಮರು ಸೇರ್ಪಡೆ ಮಾಡಬೇಕು. ಒಂದು ವೇಳೆ ಅವಕಾಶ ನೀಡಿದಿದ್ದರೆ ನಾಯಕ ಸಮುದಾಯವೇ ಕಾಂಗ್ರೆಸ್ ನಿಂದ ದೂರಾಗಲಿದೆ ಎಂದು ಅವರು ಎಚ್ಚರಿಸಿದರು.ಮಾಜಿ ಮೇಯರ್ ಶಿವಕುಮಾರ್, ಸಂಘದ ಅಧ್ಯಕ್ಷ ಎಂ. ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಆರ್. ರಾಚಪ್ಪ, ಮಹದೇವನಾಯಕ, ಕುಂಬ್ರಳ್ಳಿ ಸುಬ್ಬಣ್ಣ, ಕೆಂಪನಾಯಕ, ಶ್ರೀನಿವಾಸ ನಾಯಕ, ದ್ಯಾವಪ್ಪನಾಯಕ, ಅಣ್ಣಯ್ಯ ನಾಯಕ, ಮಲ್ಲೇಶ್ ನಾಯಕ, ಮಹದೇವಸ್ವಾಮಿ, ಪ್ರಭಾಕರ್, ಕಡಕೊಳ ಕುಮಾರಸ್ವಾಮಿ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.