ಹಿಂದುಳಿದ ಆಯೋಗ ಅಧ್ಯಕ್ಷರ ವಜಾ ಮಾಡಿ: ಪ್ರೊ.ರವಿವರ್ಮ ಕುಮಾರ್‌

KannadaprabhaNewsNetwork |  
Published : Apr 26, 2024, 01:34 AM ISTUpdated : Apr 26, 2024, 10:13 AM IST
court hammer  2.jpg

ಸಾರಾಂಶ

ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಹನ್ಸರಾಜ್‌ ಗಂಗಾರಾಮ್‌ ಅಹೀರ ತಮ್ಮ ಯಜಮಾನನನ್ನು ಓಲೈಸಲು ಪೂರ್ವಗ್ರಹ ಪೀಡಿತ ದುರುದ್ದೇಶದ ಹೇಳಿಕೆ ನೀಡಿದ್ದಾರೆ ಎಂದು ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್‌ ಕಿಡಿಕಾರಿದರು.

  ಬೆಂಗಳೂರು :  ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹನ್ಸರಾಜ್ ಗಂಗಾರಾಮ್ ಅಹೀರ ಕರ್ನಾಟಕ ರಾಜ್ಯದಲ್ಲಿ ಮುಸ್ಲಿಮರಿಗೆ ಒದಗಿಸಲಾದ ಮೀಸಲಾತಿ ಬಗ್ಗೆ ಅನಗತ್ಯ ಟೀಕೆ ಮಾಡಿದ್ದಾರೆ. ಈ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದು, ಅವರನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್‌ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್‌ ಆಗ್ರಹಿಸಿದ್ದಾರೆ.

ಗುರುವಾರ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ವರ್ಷದ ಕೆಳಗೆ ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿ ಕಿತ್ತು ಧರ್ಮಾಧಾರಿತವಾಗಿ ಮುಸ್ಲಿಮರಿಗೆ ಕೊಡಲಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಶುದ್ಧ ಸುಳ್ಳು. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಹನ್ಸರಾಜ್‌ ಗಂಗಾರಾಮ್‌ ಅಹೀರ ತಮ್ಮ ಯಜಮಾನನನ್ನು ಓಲೈಸಲು ಪೂರ್ವಗ್ರಹ ಪೀಡಿತ ದುರುದ್ದೇಶದ ಹೇಳಿಕೆ ನೀಡಿದ್ದಾರೆ. ಅದನ್ನೇ ಬಿಜೆಪಿ ಮುಸ್ಲಿಮೇತರ ಮತಗಳನ್ನು ಕ್ರೋಢೀಕರಿಸಲು ಬಳಕೆ ಮಾಡಿಕೊಂಡಿರುವುದನ್ನು ಶೋಷಿತ ಸಮುದಾಯಗಳ ಒಕ್ಕೂಟ ಖಂಡಿಸುತ್ತದೆ ಎಂದರು.

ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಅಧಿಕಾರದಲ್ಲಿ ಇರುವ ಪಕ್ಷದ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಕಾರ್ಯದಲ್ಲಿ ಯಾವುದೇ ಪ್ರಾಧಿಕಾರ ಪಾಲ್ಗೊಳ್ಳಬಾರದು. ಹನ್ಸರಾಜ್‌ ಗಂಗಾರಾಮ್‌ ಅಹೀರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಧರ್ಮಾಧಾರಿತ ಮೀಸಲಾತಿ ಹೇಳಿಕೆ ಮಾದರಿ ನೀತಿ ಸಂಹಿತೆಯ ನೇರ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರಿಬ್ಬರ ಮೇಲೂ ಕಾನೂನು ರೀತ್ಯ ಕ್ರಮಕೈಗೊಳ್ಳಬೇಕು. ಜೊತೆಗೆ ಕೂಡಲೇ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಸ್ಥಾನದಿಂದ ಹನ್ಸರಾಜ್‌ ಗಂಗಾರಾಮ್‌ ಅಹೀರ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ 1872ರಲ್ಲಿ ಮೊದಲ ಜಾತಿ ಜನಗಣತಿ ನಡೆಯಿತು. ಅದಾಗಿ ಎರಡು ವರ್ಷದಲ್ಲಿ 1874ರಲ್ಲಿ ಮೀಸಲಾತಿ ಜಾರಿಗೆ ಬಂದಿದೆ. ಹೀಗೆ ಸುಮಾರು 150 ವರ್ಷಗಳಿಂದ ಮುಸ್ಲಿಮರು ಮೀಸಲಾತಿ ಅನುಭವಿಸುತ್ತಿದ್ದಾರೆ. ಪ್ರತಿ ಹಿಂದುಳಿದ ವರ್ಗಗಳ ಆಯೋಗವು ಮುಸ್ಲಿಮರ ಪರವಾಗಿ ಅಂತಹ ಮೀಸಲಾತಿಯನ್ನು ಶಿಫಾರಸು ಮಾಡಿದೆ. ಹಾಗಾಗಿ ಅದು ಸಮಯ ಪರಿಚಿತ ಮೀಸಲಾತಿ ನೀತಿಯಾಗಿದೆ ಎಂದರು.

ದೇವರಾಜು ಅರಸು ಅವರು ಹಾವನೂರು ಆಯೋಗದ ವರದಿ ಅಂಗೀಕರಿಸುವ ಮೂಲಕ ಮುಸ್ಲಿಮರ ಪರವಾಗಿ ಮೀಸಲಾತಿ ನೀಡಿದ್ದರು. ಅದನ್ನು ಹೈಕೋರ್ಟ್‌ನಲ್ಲಿ ನಿವೃತ್ತ ನ್ಯಾ.ಕೊ.ಚನ್ನಬಸಪ್ಪ, ಎಸ್.ಸಿ.ಸೋಮಶೇಖರಪ್ಪ ಮತ್ತು ಇತರರು ಕೇಸು ದಾಖಲಿಸಿದ್ದರು. ನ್ಯಾಯಾಲಯವು ಮೀಸಲಾತಿಯ ಸಿಂದುತ್ವ ಎತ್ತಿ ಹಿಡಿದಿದೆ. ಬಸವರಾಜ ಬೊಮ್ಮಾಯಿ ಸರ್ಕಾರ ಮುಸ್ಲಿಮರ ಪರವಾಗಿ ಮೀಸಲಾತಿ ತೆಗೆದು ಹಾಕಿದಾಗ ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಮುಸ್ಲಿಮರ ಪರವಾಗಿ ಮೀಸಲಾತಿ ನಿಲ್ಲಿಸುವುದರ ವಿರುದ್ಧ ಮಧ್ಯಂತರ ಆದೇಶವಿದೆ ಎಂದು ಹೇಳಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...