ಹನುಮಸಾಗರ: ಇಲ್ಲಿಗೆ ಸಮೀಪದ ಜಹಗೀರ ಗುಡದೂರು ಗ್ರಾಮದ ಹನುಮಂತಪ್ಪ, ಅಲಿಸಾಬ ಪಿಂಜಾರ ವೀರ ಯೋಧರ ಸ್ಮಾರಕದಲ್ಲಿ ಕಲ್ಯಾಣ ಕರ್ನಾಟಕ ಹೋರಾಟಗಾರ ಬಸವರಾಜ ಗಾಣಗೇರ ಅವರು ಕಲ್ಯಾಣ ಕರ್ನಾಟಕದ ಪ್ರತ್ಯೇಕ ಧ್ವಜ ಪ್ರದರ್ಶಿಸಿದರು.
ಬಳಿಕ ಹನುಮಸಾಗರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ನಿರಂತರ ಅನ್ಯಾಯವಾಗುತ್ತಿದ್ದು, 371(ಜೆ) ವಿಶೇಷ ಸ್ಥಾನಮಾನದ ಸಮರ್ಪಕ ಅನುಷ್ಠಾನಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೂ ಕಲ್ಯಾಣ ಕರ್ನಾಟಕ ಭಾಗದ ಜನರ ಅಭಿವೃದ್ಧಿ ಹಾಗೂ ಹಕ್ಕುಗಳ ಕುರಿತು ಗಂಭೀರವಾಗಿ ಚಿಂತಿಸಬೇಕಿದೆ. ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳ ರಾಜಕಾರಣಿಗಳು ಮತ್ತು ಅಧಿಕಾರಿಗಳ ತಾರತಮ್ಯ ಧೋರಣೆಯಿಂದ ಈ ಭಾಗದ ಜನರು ಆಡಳಿತಾತ್ಮಕ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ದೂರಿದರು.ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗದೆ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನದ ಉದ್ದೇಶ ಸಮರ್ಪಕವಾಗಿ ಈಡೇರದಿರುವುದು ಈ ಭಾಗದ ಜನರಿಗೆ ಮಾಡಿದ ಅನ್ಯಾಯವಾಗಿದೆ. ಶಿಕ್ಷಣ, ಉದ್ಯೋಗ, ಮೂಲಸೌಕರ್ಯ ಹಾಗೂ ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅವರು ಮಾತನಾಡುವಾಗ ಪೊಲೀಸ್ ಸಿಬ್ಬಂದಿ ಆಗಮಿಸಿ, ಮಾತು ಮೊಟಕುಗೊಳಿಸಿ ಕರೆದುಕೊಂಡು ಹೋದರು.