ಕನ್ನಡ ಭಾಷೆಯ ಉಳಿವು, ಬೆಳವಣಿಗೆಗೆ ಆದ್ಯತೆ ಸಿಗಲಿ

KannadaprabhaNewsNetwork |  
Published : Nov 02, 2026, 03:30 AM IST
ಕಂಪ್ಲಿ ತಹಸೀಲ್ ಕಚೇರಿ ಆವರಣದಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಹಸೀಲ್ದಾರ್ ಜೂಗಲ ಮಂಜುನಾಯಕ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.ಕಂಪ್ಲಿಯ ಸೋಮಪ್ಪ ದೇವಸ್ಥಾನದಿಂದ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆಗೆ ತಹಸೀಲ್ದಾರ್ ಜೂಗಲ ಮಂಜುನಾಯಕ ಚಾಲನೆ ನೀಡಿದರು | Kannada Prabha

ಸಾರಾಂಶ

ಯುವಜನತೆ ಕನ್ನಡ ಭಾಷೆ ಮಾತನಾಡಲು ಹಿಂಜರಿಯದೆ ಇತರರಿಗೂ ಕನ್ನಡ ಕಲಿಯಲು ಪ್ರೇರಣೆ ನೀಡಬೇಕು.

ಕಂಪ್ಲಿ: ಯುವಜನತೆ ದೈನಂದಿನ ಜೀವನದಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಕನ್ನಡದ ಶ್ರೀಮಂತ ಪರಂಪರೆ, ಸಂಸ್ಕೃತಿ ಹಾಗೂ ಭಾಷಾ ಸೊಗಡನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ನಿಭಾಯಿಸಬೇಕು ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.

ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಭಾನುವಾರ 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕಂಪ್ಲಿ ತಾಲೂಕು ಸೇರಿದಂತೆ ಈ ಭಾಗದಲ್ಲಿ ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿದೆ.ಇಂತಹ ಪರಿಸ್ಥಿತಿಯಲ್ಲಿ ಕನ್ನಡಿಗರು ತಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದರ ಜತೆಗೆ, ದಿನನಿತ್ಯದ ವ್ಯವಹಾರ, ವ್ಯಾಪಾರ, ಸಾರ್ವಜನಿಕ ಸಂಪರ್ಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳಲ್ಲಿ ಕನ್ನಡ ಭಾಷೆ ಹೆಚ್ಚು ಬಳಸಬೇಕು. ಕನ್ನಡ ಭಾಷೆಯ ಬಳಕೆಯೇ ಅದರ ಉಳಿವು ಮತ್ತು ಬೆಳವಣಿಗೆಗೆ ಪ್ರಮುಖ ಆಧಾರವಾಗಿದೆ. ಯುವಜನತೆ ಕನ್ನಡ ಭಾಷೆ ಮಾತನಾಡಲು ಹಿಂಜರಿಯದೆ ಇತರರಿಗೂ ಕನ್ನಡ ಕಲಿಯಲು ಪ್ರೇರಣೆ ನೀಡಬೇಕು. ಕನ್ನಡ ಭಾಷೆ, ನಾಡು, ನುಡಿ ಹಾಗೂ ಸಂಸ್ಕೃತಿಯ ಸಂರಕ್ಷಣೆಯಲ್ಲಿ ತಹಸೀಲ್ದಾರ್‌ ಕಚೇರಿ ಮೊದಲಿನಿಂದಲೂ ಮಹತ್ವದ ಪಾತ್ರ ವಹಿಸುತ್ತಾ ಬಂದಿದೆ ಎಂದರು.

ಇದಕ್ಕೂ ಮುನ್ನ ಪಟ್ಟಣದ ಸೋಮಪ್ಪ ದೇವಸ್ಥಾನದಿಂದ ಹೊರಟ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆಗೆ ತಹಸೀಲ್ದಾರ್ ಜೂಗಲ ಮಂಜುನಾಯಕ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕನ್ನಡಾಭಿಮಾನಿಗಳು ಭಾಗವಹಿಸಿ ಕನ್ನಡ ನಾಡು, ನುಡಿಯ ಪರ ಘೋಷಣೆ ಮೊಳಗಿಸಿದರು.

ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ, ಪ್ರಭಾರ ಉಪ ತಹಸೀಲ್ದಾರ್ ಎಸ್.ಡಿ. ರಮೇಶ್, ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಇಸಿಒ ಎಂ.ರೇವಣ್ಣ, ಟಿ.ಎಂ.ಬಸವರಾಜ, ಶಿರಸ್ತೇದಾರ್ ಜಿ.ಪಂಪಾಪತಿ, ಕಂದಾಯ ಅಧಿಕಾರಿ ಎಸ್.ಸುರೇಶ್, ಆಹಾರ ನಿರೀಕ್ಷಕ ಬಿ.ವಿರುಪಾಕ್ಷಗೌಡ, ಹಾದಿಮನಿ ಕಾಳಿಂಗವರ್ಧನ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

ಕಸಾಪದಿಂದ ಧ್ವಜಾರೋಹಣ : ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿ ಆವರಣದಲ್ಲಿ ಕಸಾಪ ತಾಲೂಕಾಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಗಡಿಯ ಸಂರಕ್ಷಣೆಗೆ ಪ್ರತಿಯೊಬ್ಬ ಕನ್ನಡಿಗರೂ ಸದಾ ಬದ್ಧರಾಗಿರಬೇಕು. ಕನ್ನಡ ಭಾಷೆಯ ಬೆಳವಣಿಗೆಗೆ ಸಂಘಟಿತ ಪ್ರಯತ್ನ ಅಗತ್ಯವಿದ್ದು, ಭಾಷೆಯ ಮೇಲಿನ ಅಭಿಮಾನ ಕೇವಲ ರಾಜ್ಯೋತ್ಸವದ ಆಚರಣೆಗೆ ಸೀಮಿತವಾಗದೆ ವರ್ಷವಿಡೀ ಕಾರ್ಯರೂಪದಲ್ಲಿರಬೇಕು. ಕನ್ನಡ ಭಾಷೆಯ ಉಳಿವು ಮತ್ತು ಅಭಿವೃದ್ಧಿಗಾಗಿ ಎಲ್ಲರೂ ಟೊಂಕಕಟ್ಟಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಸಾಪ ಖಜಾಂಚಿ ಎಸ್.ಡಿ. ಬಸವರಾಜ, ಪದಾಧಿಕಾರಿ ಎಲಿಗಾರ ವೆಂಕಟರೆಡ್ಡಿ, ಎಸ್.ಶಾಮಸುಂದರರಾವ್, ಸೋಗಿ ಸಂತೋಷ್, ಕಾಳಿಂಗವರ್ಧನ, ಬಂಗಿ ದೊಡ್ಡ ಮಂಜುನಾಥ ಸೇರಿದಂತೆ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.

ಕರವೇಯಿಂದ ನಾಡಧ್ವಜಾರೋಹಣ : ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ವತಿಯಿಂದ ಉಪ ನೋಂದಣಾಧಿಕಾರಿ ಕಚೇರಿ ಬಳಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಮಹಾವೇದಿಕೆಯ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ನಾಡಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡ ಭಾಷೆಯ ಬಳಕೆ ಹಾಗೂ ಪ್ರಚಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಕೊಡುಗೆ ಮಹತ್ವದ್ದಾಗಿದೆ. ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಜತೆಗೆ ಕನ್ನಡ ಭಾಷೆಗೆ ಆಡಳಿತ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗಳು ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಹಾಗೂ ಉನ್ನತ ಪ್ರವೇಶ ಪರೀಕ್ಷೆಗಳು ಕನ್ನಡ ಭಾಷೆಯಲ್ಲಿಯೂ ನಡೆಯುವಂತಾಗಬೇಕು. ಇದರಿಂದ ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಕನ್ನಡಿಗರ ಹಕ್ಕುಗಳ ರಕ್ಷಣೆ ಮತ್ತು ಕನ್ನಡ ಭಾಷೆಯ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ಕರವೇ ತಾಲೂಕಾಧ್ಯಕ್ಷ ಬಳೆ ಮಲ್ಲಿಕಾರ್ಜುನ, ಪಿ.ಮೂಕಯ್ಯಸ್ವಾಮಿ, ವಿ.ಬಿ. ನಾಗರಾಜ, ಜಂಗಾ ನಾಗರಾಜ, ವಿ.ರಘುನಾಯಕ, ಅಕ್ಕಿ ಜಿಲಾನ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯ ಭಾಷೆಯ ವ್ಯಾಮೋಹದಿಂದ ಕನ್ನಡ ಮಾಯ
ನಾಡು, ನುಡಿ, ಜಲದ ವಿಚಾರದಲ್ಲಿ ಒಗ್ಗಟ್ಟು ಇರಲಿ: ಮಂಜುನಾಥ ಗುಳೇದಗುಡ್ಡ