ಕನ್ನಡದ ಅಭಿಮಾನ ಹೃದಯದಲ್ಲಿರಲಿ; ಅನ್ಯರಿಗೂ ಕನ್ನಡ ಕಲಿಸುವ ಕೆಲಸವಾಗಲಿ: ದೊಡ್ಡನಗೌಡ ಪಾಟೀಲ್‌

KannadaprabhaNewsNetwork |  
Published : Nov 02, 2026, 03:30 AM IST
ಕುಷ್ಟಗಿ ಪಟ್ಟಣದಲ್ಲಿ ತಾಲೂಕಾಡಳಿತ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಭುವನೇಶ್ವರಿ ದೇವಿ ಮೆರವಣಿಗೆಗೆ ಶಾಸಕ ದೊಡ್ಡನಗೌಡ ಪಾಟೀಲ ಅವರು ಚಾಲನೆ ನೀಡಿದರು. | Kannada Prabha

ಸಾರಾಂಶ

ಕುಷ್ಟಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಪಟ್ಟಣದ ಮಲ್ಲಯ್ಯ ವೃತ್ತದಿಂದ ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ಕುಷ್ಟಗಿ: ಕನ್ನಡ ಭಾಷೆ ನಮ್ಮ ನಾಡಿನ ಅಸ್ಮಿತೆ, ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆಯ ಪ್ರತೀಕವಾಗಿದೆ. ಅನ್ಯ ಭಾಷೆಗಳನ್ನು ಕಲಿಯುವ ಜತೆಗೆ ಅನ್ಯರಿಗೂ ನಮ್ಮ ಕನ್ನಡ ಭಾಷೆ ಕಲಿಸುವ ಕೆಲಸವಾಗಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ್‌ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕನ್ನಡದ ಮೇಲಿನ ಅಭಿಮಾನ ಕೇವಲ ವೇದಿಕೆ ಭಾಷಣಗಳಿಗೆ ಸೀಮಿತವಾಗದೆ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರಬೇಕು. ಕನ್ನಡ ನಮ್ಮ ತಾಯಿ ಭಾಷೆಯಾಗಿದ್ದು, ನಾಡು, ನುಡಿ, ಸಂಸ್ಕೃತಿ, ಕಲೆ ಮತ್ತು ಸಾಹಿತ್ಯದ ಬಗ್ಗೆ ಪ್ರತಿಯೊಬ್ಬರಿಗೂ ಸ್ವಾಭಿಮಾನ ಇರಬೇಕು. ಕನ್ನಡವನ್ನು ಕೇವಲ ನವೆಂಬರ್ ತಿಂಗಳಿಗೆ ಸೀಮಿತಗೊಳಿಸದೆ ನಿತ್ಯದ ಬದುಕಿನಲ್ಲಿ ಬಳಸಬೇಕು ಎಂದರು.

ಅನ್ಯ ಭಾಷೆಗಳನ್ನು ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ, ಅನ್ಯ ಭಾಷೆಗಳ ವ್ಯಾಮೋಹದಲ್ಲಿ ತಾಯ್ನುಡಿಯನ್ನು ಮರೆಯಬಾರದು. ಬೇರೆ ಭಾಷೆಯವರು ತಮ್ಮ ಭಾಷೆಯನ್ನು ಗೌರವಿಸುವಂತೆ ನಮ್ಮ ಕನ್ನಡ ಭಾಷೆಗೂ ಗೌರವ ನೀಡುವ ವಾತಾವರಣ ನಿರ್ಮಿಸಬೇಕು. ಕನ್ನಡ ಭಾಷೆಯ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಹೇಳಿದರು.

ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಮಾತನಾಡಿ, ಕನ್ನಡದ ಕಂಪು ಮತ್ತು ಕನ್ನಡತನ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಪಣ ತೊಡಬೇಕು. ಮಕ್ಕಳ ಮನಸ್ಸಿನಲ್ಲಿ ಕನ್ನಡದ ಬೀಜ ಬಿತ್ತಬೇಕು ಎಂದರು.

ರಾಜ್ಯೋತ್ಸವದ ಅಂಗವಾಗಿ ಬೆಳಗ್ಗೆ ಪಟ್ಟಣದ ಮಲ್ಲಯ್ಯ ವೃತ್ತದಿಂದ ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಬಳಿಕ ತಾಲೂಕು ಕ್ರೀಡಾಂಗಣದಲ್ಲಿ ಮಕ್ಕಳಿಂದ ಕನ್ನಡ ನಾಡು-ನುಡಿಯ ಕುರಿತ ಸಾಂಸ್ಕೃತಿಕ ನೃತ್ಯ ಪ್ರದರ್ಶನಗಳು ನಡೆದವು.

ಗ್ರೇಡ್-2 ತಹಸೀಲ್ದಾರ್ ರಜನಿಕಾಂತ, ತಾಪಂ ಇಒ ಅಮರೇಶ, ಸಿಪಿಐ ವಿಶ್ವನಾಥ ಹಿರೇಗೌಡ್ರ, ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ, ಸಮಾಜ ಕಲ್ಯಾಣಾಧಿಕಾರಿ ತುಗ್ಲೆಪ್ಪ ದೇಸಾಯಿ, ಬಿಇಒ ಉಮಾದೇವಿ ಬಸಾಪುರ, ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ, ಗಣ್ಯರಾದ ಶರಣಪ್ಪ ಹೂಗಾರ, ನಜೀರಸಾಬ ಮೂಲಿಮನಿ, ರವೀಂದ್ರ ಬಾಕಳೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯ ಭಾಷೆಯ ವ್ಯಾಮೋಹದಿಂದ ಕನ್ನಡ ಮಾಯ
ಕನ್ನಡ ಭಾಷೆಯ ಉಳಿವು, ಬೆಳವಣಿಗೆಗೆ ಆದ್ಯತೆ ಸಿಗಲಿ