ಚಿತ್ರದುರ್ಗ: ಕರ್ನಾಟಕ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಮುಂದೆ 3,688 ಪ್ರಕರಣಗಳ ವಿಚಾರಣೆ ಬಾಕಿ ಇದ್ದು, ಮೂರು ತಿಂಗಳಲ್ಲಿ 208 ಗಂಭೀರ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದು, ತ್ವರಿತ ನ್ಯಾಯದಾನಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ತಿಳಿಸಿದರು.
ದೌರ್ಜನ್ಯ ಮತ್ತು ಪೋಕ್ಸೋ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಬಾರದು. ಯಾವುದೇ ಕಾರಣಕ್ಕೂ ಸಾಕ್ಷ್ಯಗಳ ಕೊರತೆಯಿಂದ ಆರೋಪಿಗಳು ಪಾರಾಗಬಾರದು. ಕಡ್ಡಾಯವಾಗಿ 60 ದಿನಗಳೊಳಗೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಬೇಕು ಎಂದು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದೇನೆ. ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅನುದಾನದ ಹಣ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂಬ ದೂರುಗಳಿವೆ. ಇನ್ನು ಮುಂದೆ ಈ ಅನುದಾನದಡಿ ನಡೆಯುವ ಪ್ರತಿಯೊಂದು ಕಾಮಗಾರಿಯ ಸ್ಥಳದಲ್ಲಿ ಮಾಹಿತಿ ಫಲಕ ಅಳವಡಿಸುವುದು ಕಡ್ಡಾಯ. ಇದರಿಂದ ಜನರಿಗೆ ಅನುದಾನದ ಮೊತ್ತ ಮತ್ತು ಕಾಮಗಾರಿಯ ವಿವರ ತಿಳಿಯಲಿದೆ ಎಂದರು.
ವಸತಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಿಗೆ ವಿಶೇಷ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು. ವಸತಿ ಶಾಲೆಗಳಲ್ಲಿನ ಮೂಲಸೌಕರ್ಯ ಕೊರತೆಗಳನ್ನು ಶೀಘ್ರದಲ್ಲೇ ಸರಿಪಡಿಸುವ ಭರವಸೆಯನ್ನು ಜಿಲ್ಲಾಧಿಕಾರಿ, ಸಿಇಓ ಹಾಗೂ ಅಪರ ಜಿಲ್ಲಾಧಿಕಾರಿಗಳು ನೀಡಿದ್ದಾರೆ ಎಂದು ತಿಳಿಸಿದರು.ನಕಲಿ ಜಾತಿ ಪ್ರಮಾಣ ಪತ್ರಕ್ಕೆ ತಡೆ:
ಕರ್ನಾಟಕ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯರಾದ ಸುನೀಲ್ ಎಂ.ಉಕ್ಕಲಿ, ಎಂ.ಕುಂಬಯ್ಯ, ಕಾರ್ಯದರ್ಶಿ ಡಾ.ಎಚ್.ಎನ್.ಶಿವರಾಮು, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ.ಸಿಇಒ ಡಾ.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮತ್ತಿತರರಿದ್ದರು.
ವರದಿ ಸಲ್ಲಿಕೆಗೆ ಆದೇಶ
ಜಿಲ್ಲೆಯಲ್ಲಿ ಎಸ್‌ಸಿ ಹಾಗೂ ಎಸ್‌ಟಿ ಜನಸಂಖ್ಯೆ ಶೇ.45 ರಿಂದ 50ರಷ್ಟಿದ್ದು, ಅನೇಕರಿಗೆ ಸ್ವಂತ ಭೂಮಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಲಭ್ಯವಿರುವ ಭೂಮಿ ಮತ್ತು ಎಷ್ಟು ಕುಟುಂಬಗಳಿಗೆ ವಿತರಿಸಬಹುದು ಎಂಬ ಬಗ್ಗೆ ಸಂಪೂರ್ಣ ವರದಿಯನ್ನು 10 ದಿನಗಳೊಳಗೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಡಾ.ಎಲ್.ಮೂರ್ತಿ ತಿಳಿಸಿದರು.
ಕುಂದುಕೊರತೆಗಳ ಆಲಿಕೆ ದೂರು ಸ್ವೀಕಾರ
ರಸ್ತೆ ಅಗಲಿಕರಣದ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕವಾಡಿಗರಹಟ್ಟಿಯಲ್ಲಿ ಪರಿಶಿಷ್ಟ ಜಾತಿಯ ಸುಮಾರು 56 ಕುಟುಂಬಗಳ ಮನೆ ತೆರವು ಮಾಡಿದ್ದು, ಜನರು ಬೀದಿಪಾಲು ಆಗಿದ್ದಾರೆ. ಕೂಡಲೇ ಸಂತ್ರಸ್ತರಿಗೆ ಮನೆಗಳನ್ನು ಮಂಜೂರು ಮಾಡಬೇಕು. ಚಿತ್ರದುರ್ಗ ನಗರದಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಾಬು ಜಗಜೀವನ್ ರಾಂ ಭವನ, ಮಾದಾರ ಚನ್ನಯ್ಯ ಸಭಾ ಭವನಗಳ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಅಪೂರ್ಣ ಕಟ್ಟಡಗಳು ಅನೈತಿಕ ಚಟುವಟಿಕೆ ತಾಣಗಳಾಗಿವೆ. ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಸೇರಿದಂತೆ ಮತ್ತಿತರೆ ಸಮಸ್ಯೆಗಳನ್ನು ಬಗೆಹರಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರು ಅಧ್ಯಕ್ಷರಲ್ಲಿ ಮನವಿ ಮಾಡಿದರು.