ಎಂಟು ಸಾವಿರ ಮೇಲ್ಮನವಿ ಪ್ರಕರಣಗಳ ವಿಲೇವಾರಿ

KannadaprabhaNewsNetwork |  
Published : Jun 22, 2025, 01:18 AM ISTUpdated : Jun 22, 2025, 11:42 AM IST
ಫೋಟೋ 21ಎಚ್‌ಎಸ್‌ಡಿ8: ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನ ಕುರಿತು, ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಮೊದಲ ಹಂತ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳಿಗೆ ಆಯೋಜಿಸಲಾದ ಕಾರ್ಯಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ  ಮಾತನಾಡಿದರು. | Kannada Prabha

ಸಾರಾಂಶ

ಚಿತ್ರದುರ್ಗ ನಗರದ ಜಿಪಂ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಮಾತನಾಡಿದರು.

 ಚಿತ್ರದುರ್ಗ :  ರಾಜ್ಯ ಮಾಹಿತಿ ಆಯೋಗದ ಮುಂದೆ ಬಾಕಿ ಇದ್ದ 50 ಸಾವಿರಕ್ಕೂ ಅಧಿಕ ಮೇಲ್ಮನವಿ ಪ್ರಕಣಗಳ ಪೈಕಿ ಕಳೆದ ಮಾರ್ಚ್‍ನಿಂದ ಇಲ್ಲಿಯವರೆಗೂ 8000 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಹೇಳಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನ ಕುರಿತು, ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಮೊದಲ ಹಂತ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳಿಗೆ ಆಯೋಜಿಸಲಾದ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ 787 ಮೇಲ್ಮನವಿ ಪ್ರಕರಣಗಳು ರಾಜ್ಯ ಮಾಹಿತಿ ಆಯೋಗದ ಮುಂದಿವೆ. ಇದರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಂಬಂಧಿಸಿದಂತೆ 325, ಕಂದಾಯ 117, ಅರಣ್ಯ 55, ಸಮಾಜ ಕಲ್ಯಾಣ 53, ನಗರಾಭಿವೃದ್ಧಿ ಇಲಾಖೆ 46, ಜಲಸಂಪನ್ಮೂಲ 28 ಹಾಗೂ ಗೃಹ ಇಲಾಖೆಗೆ ಸಂಬಂಧಿಸಿದಂತೆ 19 ಮೇಲ್ಮನವಿ ಪ್ರಕರಣಗಳು ಇವೆ. ಹಣಕಾಸು, ಸಾರಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಬಂಧಿಸಿದಂತೆ ತಲಾ ಒಂದು ಪ್ರಕರಣಗಳಿವೆ. ಉಳಿದಂತೆ ಇತರೆ ಇಲಾಖೆ ಹಾಗೂ ಸರ್ಕಾರದ ಅನುದಾನಿತ ಸಂಸ್ಥೆಗಳಿಗೆ ಸಂಬಂಧಿಸಿದಂತೆ 141 ಮೇಲ್ಮನವಿ ಪ್ರಕರಣಗಳು ಇವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಏಪ್ರಿಲ್ ನಿಂದ ಜೂನ್ ವರೆಗೆ 1061 ಮಾಹಿತಿ ಹಕ್ಕು ಅರ್ಜಿಗಳು ಸಲ್ಲಿಕೆಯಾಗಿವೆ. ಚಿತ್ರದುರ್ಗ ಜಿಲ್ಲೆಯ ಮಾಹಿತಿ ಅಧಿಕಾರಿಗಳ ಕಾರ್ಯ ತೃಪ್ತಿದಾಯಕವಾಗಿದೆ ಎಂದರು.

*ಮಾಹಿತಿ ಶುಲ್ಕಗಳ ಪರಿಷ್ಕರಣೆ: ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗಿ 20 ವರ್ಷಗಳು ಸಂದಿದ್ದು, ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆಯಲು ನಿಗದಿಪಡಿಸಿದ್ದ ಶುಲ್ಕಗಳ ಪರಿಷ್ಕರಣೆ ಮಾಡುವಂತೆ ರಾಜ್ಯ ಆಡಳಿತ ಸುಧಾರಣ ಸಮಿತಿ ಸಲಹೆ ನೀಡಿದೆ. ಮುಂಬರುವ ಜುಲೈ ಮೊದಲ ವಾರದಲ್ಲಿ ಸಭೆ ನಡೆಸಿ, ಹೊಸ ಶುಲ್ಕಗಳನ್ನು ಜಾರಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದರು.

ಸದ್ಯ ಮಾಹಿತಿ ಅರ್ಜಿಯ ಜತೆ 10 ರು.ಶುಲ್ಕ ನೀಡಬೇಕಾಗಿದ್ದು, ಇದನ್ನು 25 ರು.ಗೆ ಹೆಚ್ಚಿಸಲು ಹಾಗೂ ಪ್ರತಿ ಪುಟದ ದಾಖಲೆ ನೀಡಬೇಕಾದ 2 ರು. ಶುಲ್ಕವನ್ನು 5 ರು.ಗೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತವಾನೆ ಸ್ಲಲಿಸಲಾಗಿದೆ. ಸಿ.ಡಿ ಉಪಯೋಗ ಬಳಕೆಯಲ್ಲಿ ಇಲ್ಲದಿರುವುದರಿಂದ, ಇದರ ಹೊರತಾಗಿ ಪೆನ್‍ಡ್ರೈನ್ ಮೂಲಕ ನೀಡುವ ಮಾಹಿತಿಗೆ ಹೊಸದೊಂದು ಶುಲ್ಕ ನಿಗದಿ ಪಡಿಸಲು ಚಿಂತನೆ ನಡೆಸಲಾಗಿದೆ. ಬಡತನ ರೇಖೆಗಿಂತ ಕಡಿಮೆ ಇರುವ ಬಿಪಿಲ್ ಕಾರ್ಡುದಾರರು 100 ಪುಟದವರೆಗೆ ಮಾಹಿತಿ ಪಡೆಯಲು ಯಾವುದು ಶುಲ್ಕ ನೀಡುವಂತಿಲ್ಲ. ಆದರೆ ಮಾಹಿತಿಗೆ ಅರ್ಜಿ ಸಲ್ಲಿಸುವಾಗ ಬಿಪಿಎಲ್ ಕಾರ್ಡ್ ಜೆರಾಕ್ಸ್ ಹಾಗೂ ಚಾಲ್ತಿಯಲ್ಲಿರುವ ಆದಾಯ ಪ್ರಮಾಣ ಪತ್ರ ಮೂಲ ಪ್ರತಿ ಲಗತ್ತಿಸಬೇಕು ಎಂದರು.

ಮಾಹಿತಿ ಆಯುಕ್ತ ಎಸ್.ರಾಜಶೇಖರ್ ಮಾತನಾಡಿ, ಜಿಲ್ಲೆಯ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯಿದೆ. ಅರ್ಜಿಗಳು ಸ್ವೀಕಾರವಾದ ತಕ್ಷಣ ಅವರಿಗೆ ಗೊಂದಲ ಉಂಟಾಗುತ್ತಿದೆ. ಇದನ್ನು ನಿವಾರಿಸಲು ಅಧಿಕಾರಿಗಳು ಕಾಯ್ದೆಯ ಬಗ್ಗೆ ಅಧ್ಯಯನ ನಡೆಸಬೇಕು. ಕಾಯ್ದೆಯ ಜಾರಿಯ ಮೂಲ ಉದ್ದೇಶ ಸಾರ್ವಜನಿಕ ಆಡಳಿತದಲ್ಲಿ ಪಾದರ್ಶಕತೆ ತರುವುದು, ಅಧಿಕಾರಿಗಳ ಜವಾಬ್ದಾರಿ ಹೆಚ್ಚಿಸಿ, ಕೆಲಸಗಳಿಗೆ ಹೊಣೆಗಾರರನ್ನಾಗಿ ಮಾಡಿ ಉತ್ತಮ ಆಡಳಿತ ನೀಡುವುದಾಗಿದೆ ಎಂದರು.

ಸ್ವಾತಂತ್ರ್ಯದ ನಂತರ ಸಾರ್ವಜನಿಕರಿಗೆ ಆಡಳಿತದ ವಿಷಯಗಳನ್ನು ತಿಳಿದುಕೊಳ್ಳಲು ಮಾಹಿತಿ ಹಕ್ಕು ಕಾಯ್ದೆ ಅಧಿಕಾರ ನೀಡಿದೆ. ಇದರ ಸದ್ಭಳಕೆಯಾಗಬೇಕು. ಯಾವುದೇ ರೀತಿಯ ವೈಯಕ್ತಿಕ ಮಾಹಿತಿಗಳನ್ನು ಕಾಯ್ದೆಯಡಿ ಮೂರನೇ ವ್ಯಕ್ತಿಗೆ ನೀಡಲು ಬರುವುದಿಲ್ಲ. 2005ರಲ್ಲಿ ಕಾಯ್ದೆ ಜಾರಿಯಾಗಿದ್ದು ಅದಕ್ಕೂ ಮುಂಚಿನ 20 ವರ್ಷ ಅವಧಿಯ ದಾಖಲೆಗಳನ್ನು ಮಾತ್ರ ಕಾಯ್ದೆಯ ಮೂಲಕ ಸಾರ್ವಜನಿಕರು ಪಡೆದುಕೊಳ್ಳಬಹುದು. ನೂರಾರು ವರ್ಷಗಳ ಹಿಂದಿನ ದಾಖಲೆ ನೀಡಲು ಕಾಯ್ದೆಯಲ್ಲಿ ಕಡ್ಡಾಯ ಪಡಿಸಲಾಗಿಲ್ಲ ಎಂದರು.

ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿದರು. ಕಾರ್ಯಗಾರ ಹಾಗೂ ಸಂವಾದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಂಗಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ರಾಜ್ಯದಲ್ಲಿ 26 ಜನರು ಕಪ್ಪು ಪಟ್ಟಿಗೆ:

ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲದೇ, ಅಧಿಕಾರಿಗಳನ್ನು ಬೆದರಿಸಲು ಹಾಗೂ ತೊಂದರೆ ನೀಡಲು ಮಾಹಿತಿ ಅರ್ಜಿ ಸಲ್ಲಿಸುತ್ತಿದ್ದ 26 ಜನರನ್ನು ರಾಜ್ಯ ಮಾಹಿತಿ ಆಯೋಗ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಇದರಲ್ಲಿ ಚಿತ್ರದುರ್ಗ ಜಿಲ್ಲೆಯ ಒರ್ವ ವ್ಯಕ್ತಿಯು ಕಪ್ಪು ಪಟ್ಟಿಗೆ ಸೇರಿದ್ದಾನೆ. ಅಧಿಕಾರಿಗಳು ಮಾಹಿತಿ ನೀಡದಿದ್ದಾಗ ಅಥವಾ ಅರ್ಜಿದಾರರೊಂದಿಗೆ ಮಾತುಕತೆ ನಡೆಸಲು ಮುಂದಾಗ ಮಾತ್ರ ಬೆದರಿಸುವವರು ಹುಟ್ಟಿಕೊಳ್ಳುತ್ತಾರೆ. ಅಧಿಕಾರಿಗಳು ವಿಳಂಬ ಮಾಡದೇ ಕಾಲಮಿತಿಯಲ್ಲಿ ಮಾಹಿತಿ ನೀಡಬೇಕು. ಜಿಲ್ಲಾ ಪಂಚಾಯಿತಿಯ ಪ್ರತಿ ತ್ರೈಮಾಸಿಕ ಕೆಡಿಪಿ ಸಭೆಗಳಲ್ಲಿ ಜನಪ್ರತಿನಿಧಿಗಳು ಮಾಹಿತಿ ಹಕ್ಕು ವಿಷಯವನ್ನು ಚರ್ಚಿಸಿ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ