ಗದಗ: ಎಲ್ಲ ಇಲಾಖೆಯ ಅಧಿಕಾರಿಗಳು ನಿಷ್ಕಾಳಜಿ ತೋರದೆ, ಜನರ ಅಹವಾಲುಗಳನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ನಡೆದ ಗದಗ ತಾಲೂಕಿನ ಸಾರ್ವಜನಿಕರಿಂದ ಅಹವಾಲು ಕುಂದು-ಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣ ವಿಲೇವಾರಿಯ ಗದಗ ತಾಲೂಕು ಮಟ್ಟದ ಜನಸ್ಪಂದನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಅಸುಂಡಿ ಗ್ರಾಮದ ವೀರಯ್ಯ ಶಿವಯ್ಯ ಗುರಬಶೆಟ್ಟೆಮಠ ಅವರು ನಿವೇಶನ ಖರೀದಿಸಿ ಮನೆಯನ್ನು ಕಟ್ಟಿ 3-4 ವರ್ಷವಾದರೂ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣ ತುಂಬಾ ತೊಂದರೆಯಾಗುತ್ತಿದ್ದು, ಮನೆಗೆ ವಿದ್ಯುತ್ ಸಹ ತಾತ್ಕಾಲಿಕವಾಗಿ ತೆಗೆದುಕೊಂಡಿದ್ದರಿಂದ ತಿಂಗಳಿಗೆ ₹1 ಸಾವಿರದಿಂದ ₹2 ಸಾವಿರ ವಿದ್ಯುತ್ ಬಿಲ್ ಬರುತ್ತಿದೆ ಎಂದು ಹೇಳಿದರು.
ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಅವರು, ಸಂಬಂಧಿಸಿದ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸೂಚಿಸಿದರು.ನರಸಾಪುರ ಗ್ರಾಮದ ಈರಪ್ಪ ಕಾಳಪ್ಪ ಬಡಿಗೇರ ತಮ್ಮ ಕಾರ್ಮಿಕ ಕಾರ್ಡ್ ರದ್ದಾಗಿದ್ದು, ಹಲವಾರು ಬಾರಿ ಕಾರ್ಮಿಕ ಇಲಾಖೆಗೆ ಹೋದರೂ ಪ್ರಯೋಜನವಾಗಿಲ್ಲ ಎಂದು ಅಹವಾಲು ಸಲ್ಲಿಸಿದರು. ನಗರದ ಗಂಗಾಪುರ ಪೇಟೆಯ ರೇಣುಕಾ ಹಾತಲಗೇರಿ ತಮಗೆ ಮನೆಯಿಲ್ಲ, ಹಾಗಾಗಿ ಮನೆ ಕೊಡಲು ಕೇಳಿದಾಗ ಜಿಲ್ಲಾಧಿಕಾರಿ ಸಂಬಂಧಿಸಿದ ಅಧಿಕಾರಿಗಳಿಗೆ ನಿಯಮಾನುಸಾರ ಪರಿಶೀಲನೆ ಮಾಡಿ ಮನೆ ನೀಡಲು ಸೂಚಿಸಿದರು.
ಸ್ವಾತಂತ್ರ್ಯ ವಿಜ್ಞಾನ ಉದ್ಯಾನದಲ್ಲಿ ದೀಪ ಅಳವಡಿಸುವಂತೆ ನಗರದ 1ನೇ ಕ್ರಾಸ್‌ನ ಹುಡ್ಕೊ ಕಾಲನಿಯ ಜಾಗ್ರತ ಗಜಾನನ ಸೇವಾ ಸಮಿತಿಯಿಂದ ಅಹವಾಲು ನೀಡಲಾಯಿತು.ನಗರದ ನಿವಾಸಿಯಾದ ರಮೇಶ ಎಚ್. ಮೇರೆವಾಡೆ ಅವರು ಹಿರಿಯ ನಾಗರಿಕರಿಗೆ ನಗರ ಸಂಚಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ, ಸಾರ್ವಜನಿಕ ಉದ್ಯಾನದ ಅವ್ಯವಸ್ಥೆ ಸರಿಪಡಿಸುವಂತೆ ಅಹವಾಲು ನೀಡಿದರು.
ಹುಲಕೋಟಿ ಹದ್ದಿನ ಅಸುಂಡಿ ಗ್ರಾಮದ ರಿಸ್.ನಂ. 339/1ರಿಂದ 34ರ ವರೆಗಿನ 50 ಎಕರೆಗೂ ಹೆಚ್ಚು ಹೊಲಗಳಿಗೆ ದಾರಿಯಿಲ್ಲದ ಕಾರಣ ಬೆಳೆ ಬೆಳೆಯಲು ತುಂಬಾ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಅಹವಾಲು ನೀಡಿದರು.ರಾಜೀವ ಗಾಂಧಿ ನಗರದ ನಿವಾಸಿಯಾದ ರಮೇಶ ಕೋಳೂರ, ಪ್ರತಿ ತಾಲೂಕು ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದು-ಕೊರತೆ ನಿವಾರಣೆ ಸಭೆಗಳು ನಿಯಮಿತವಾಗಿ ಜರಗುತ್ತಿಲ್ಲ ಎಂದು ಅಹವಾಲು ನೀಡಿದರು.
ಆನಂತರ ಲಕ್ಕುಂಡಿ ಗ್ರಾಮದ ಉಮೇಶಗೌಡ ಯಲ್ಲಪ್ಪಗೌಡ ಪಾಟೀಲ್ ಅವರಿಗೆ ಬಂದ ಬೆಳೆ ಪರಿಹಾರ ಮತ್ತು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಹಣವನ್ನು ಬ್ಯಾಂಕ್‌ನವರು ತಮ್ಮ ಸಾಲದ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ ಎಂದು ಅಹವಾಲು ನೀಡಿದರು. ಕೂಡಲೇ ಬೆಳೆ ಪರಿಹಾರದ ಹಣ ಹಿಂತಿರುಗಿಸುವಂತೆ ಸಂಬಂಧಿಸಿದ ಬ್ಯಾಂಕ್ ಮ್ಯಾನೇಜರ್‌ಗೆ ಡಿಸಿ ಸೂಚಿಸಿದರು.ಜಿಪಂ ಸಿಇಒ ಭರತ್ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಗದಗ ತಾಲೂಕಿನಾದ್ಯಂತ 57 ಅರ್ಜಿಗಳು ಬಂದವು. ಕೆಲವು ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರೆಯಿತು. ಉಳಿದವುಗಳನ್ನು ನಿಯಮಾನುಸಾರ ಶೀರ್ಘ ವಿಲೇವಾರಿ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು. ತಹಸೀಲ್ದಾರ್ ಶ್ರೀನಿವಾಸ ಕುಲಕರ್ಣಿ ಸ್ವಾಗತಿಸಿದರು. ವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.