ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಈ ಸ್ವತ್ತು ದಾಖಲೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಕಚೇರಿ ಮಟ್ಟದಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಅಲೆದಾಟವನ್ನು ನಿವಾರಿಸಬೇಕು. ನಿಗದಿತ ಕಾಲಾವಧಿಯೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸೂಚನೆ ನೀಡಿದರು.
ಮನೆ ಬಾಗಿಲಿಗೆ ತೆರಿಗೆ ಸೌಲಭ್ಯ ಒದಗಿಸುವ ಕುರಿತಂತೆ ಚರ್ಚೆ ನಡೆಸಿದ ಅವರು, ಬಿ ಖಾತಾ ನಿರ್ವಹಣೆಯಲ್ಲಿ ಕಂದಾಯ ಇಲಾಖೆಯ ಕೆಲವೊಂದು ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳಡಿ ನೀಡಲಾಗುವ ಅನುದಾನವನ್ನು ಸಮರ್ಪಕ ಬಳಕೆ ಮಾಡಿಕೊಳ್ಳಬೇಕು. ನಗರಾದ್ಯಂತ ಇರುವ ಹೊಂಡ ಗುಂಡಿಗಳಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಅವುಗಳನ್ನು ತಕ್ಷಣ ಸರಿಪಡಿಸಲು ಸೂಚಿಸಿದರು. ಪಾಲಿಕೆ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗದಂತೆ ಒಳಚರಂಡಿ ವ್ಯವಸ್ಥೆ ಮತ್ತು ಮಳೆನೀರಿನ ನಿರ್ವಹಣೆ ಬಗ್ಗೆ ತಕ್ಷಣದ ಕ್ರಮ ಕೈಗೊಳ್ಳಲು ಎಂಜಿನಿಯರಿಂಗ್ ವಿಭಾಗಕ್ಕೆ ಆದೇಶಿಸಿದರು.
ತುಂಗಾ ನದಿಗೆ ಸೇರುತ್ತಿರುವ ಡ್ರೈನೇಜ್ ನೀರಿನಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಅಧಿಕಾರಿಗಳು ತಡೆಗಟ್ಟಲು ತ್ವರಿತ ಕ್ರಮ ಕೈಗೊಳ್ಳಬೇಕು. ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ವ್ಯಾಪ್ತಿಯ ಅನೇಕ ಯೋಜನೆಗಳು ಅಪೂರ್ಣವಾಗಿದ್ದು, ಅವುಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಿವಮೊಗ್ಗ ನಗರವನ್ನು ಇನ್ನಷ್ಟು ಸ್ವಚ್ಛ ಹಾಗೂ ನಾವೀನ್ಯತೆಯೊಂದಿಗೆ ಅಭಿವೃದ್ಧಿಪಡಿಸಲು, ಅಗತ್ಯ ಬದಲಾವಣೆ ಹಾಗೂ ಕ್ರಮಗಳ ಬಗ್ಗೆ ಚರ್ಚೆ ನಡೆಸಿ, ಕಾರ್ಯರೂಪಕ್ಕೆ ತರಲು ಆದೇಶಿಸಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಸೇರಿದಂತೆ ವಿವಿಧ ಹಿರಿಯ ಅಧಿಕಾರಿಗಳು ಇದ್ದರು.