ಧಾರವಾಡ:
ನಗರದ ಹೊರ ವಲಯದ ಐಐಐಟಿ ಬಳಿ ಹುಬ್ಬಳ್ಳಿ ಮೂಲದ ಫೆಲೋಮಿನಾ ಎಂಬುವರಿಗೆ ಸೇರಿದ್ದ ಮೂರು ಎಕರೆ ಜಮೀನಿಗೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ. ಈ ಜಮೀನಿನಲ್ಲಿ ನಿವೇಶನ ಮಾಡಲು ಫೆಲೋಮಿನಾ ಹಾಗೂ ಅವರ ಬೆಂಬಲಿಗರು ಮಂಗಳವಾರ ಮುಂದಾದಾಗ ಜಮೀನಿನ ಪಕ್ಕದವರು ವಿರೋಧ ಮಾಡಿದ್ದಾರೆ. ಈ ಮಧ್ಯೆ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದು, ಜಮೀನು ಅಳತೆ ಮಾಡಿಸಿ ನಿವೇಶನ ಅಭಿವೃದ್ಧಿ ಮಾಡಲು ಸ್ಥಳೀಯರು ಆಗ್ರಹಿಸಿದ್ದಾರೆ.
ಈಗಾಗಲೇ ನಮ್ಮ ಪರವಾಗಿ ನ್ಯಾಯಾಲಯದ ತೀರ್ಪು ಬಂದಿದ್ದು ಮತ್ತೇಕೆ ಅಳತೆ ಮಾಡುವುದು ಎಂದು ಫೆಲೋಮಿನಾ ಬೆಂಬಲಿಗರು ವಾದಿಸಿದ್ದಾರೆ. ಎರಡು ಗುಂಪುಗಳ ಮಧ್ಯೆ ವಾಗ್ವಾದ ಜೋರಾದಾಗ, ಫೆಲೋಮಿನಾ ಅವರ ಅಂಗರಕ್ಷಕರು ಏಳು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಒಂದು ನೆಲಕ್ಕೆ ಹಾರಿಸಿದ್ದಾರೆ. ಈ ಸಮಯದಲ್ಲಿ ಸ್ಥಳೀಯರಾದ ವಿಠ್ಠಲ್ ವಾಲೀಕಾರ (24) ಎಂಬುವರ ಕಾಲಿಗೂ ಗುಂಡು ತಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವಿದ್ಯಾಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆ ಸುದ್ದಿ ತಿಳಿದು ಪೊಲೀಸ ಆಯುಕ್ತ ಎನ್. ಶಶಿಕುಮಾರ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.