ಗದಗ: ಗದಗ- ಬೆಟಗೇರಿ ನಗರಸಭೆಯ ಮೂವರು ಸದಸ್ಯರ ಅನರ್ಹತೆಗೆ ಸಂಬಂಧಿಸಿದಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ನಡೆಸಬೇಕಿದ್ದ ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಬಿಜೆಪಿ ಸದಸ್ಯರ ಸದಸ್ಯತ್ವ ಮುಂದುವರಿಯಲಿದೆ.
ಹೈಕೋರ್ಟ್ ದ್ವಿಸದಸ್ಯ ಪೀಠದ ಸೂಚನೆಯಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರು, ಮೂವರು ಸದಸ್ಯರಿಗೆ ಮತ್ತೊಮ್ಮೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಪ್ರಾದೇಶಿಕ ಆಯುಕ್ತರು ವಿಚಾರಣೆಗೆ ಹಾಜರಾಗುವಂತೆ ನೀಡಿದ ನೋಟಿಸ್ ಪ್ರಶ್ನಿಸಿ ಮೂವರು ಸದಸ್ಯರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಿದ್ದರು. ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ವಿಜಯ್ ಬಿಷ್ಣೋಯಿ ಅವರಿದ್ದ ಪೀಠ, ಹೈಕೋರ್ಟ್ ದ್ವಿಸದಸ್ಯ ಪೀಠದ ಆದೇಶ ಹಾಗೂ ಅದರ ಅಡಿಯಲ್ಲಿ ನಡೆಯುತ್ತಿರುವ ಎಲ್ಲಾ ನಡವಳಿಕೆಗಳಿಗೆ ಬುಧವಾರ ತಡೆ ನೀಡಿದೆ.ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆ, ಸದಸ್ಯ ಗೂಳಪ್ಪ ಮುಶಿಗೇರಿ ಅವರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ಪ್ರಕರಣದ ಮುಂದಿನ ಎಲ್ಲ ನಡವಳಿಕೆಗಳಿಗೆ ತಡೆ ನೀಡಿರುವುದರಿಂದ, ಪ್ರಾದೇಶಿಕ ಆಯುಕ್ತರ ಮುಂದೆ ನಡೆಯುತ್ತಿರುವ ವಿಚಾರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.