ಪೊಲೀಸರ ಮೇಲೆ ಅಸಮಾಧಾನ: ಬಾಗಿನ ಅರ್ಪಣೆಯಿಂದ ಶಾಸಕ ಗವಿಯಪ್ಪ ದೂರ

KannadaprabhaNewsNetwork |  
Published : Sep 23, 2024, 01:27 AM IST
22ಎಚ್‌ಪಿಟಿ7- ಹೊಸಪೇಟೆಯ ತುಂಗಭದ್ರಾ ಜಲಾಶಯದ ಮುಖ್ಯದ್ವಾರದ ಬಳಿ ಶಾಸಕ ಎಚ್‌.ಆರ್‌. ಗವಿಯಪ್ಪ ಅವರ ಬೆಂಬಲಿಗರನ್ನು ತಡೆದ ಹಿನ್ನೆಲೆ ಪೊಲೀಸರ ಮೇಲೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ಟಿಬಿ ಡ್ಯಾಂ ಗೇಟ್‌ನ ಮುಖ್ಯದ್ವಾರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು

ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ಶಾಸಕ ಎಚ್.ಆರ್. ಗವಿಯಪ್ಪ ತಮ್ಮ ಬೆಂಬಲಿಗರ ವಾಹನಗಳನ್ನು ಗೇಟ್‌ನಲ್ಲಿ ಪೊಲೀಸರು ತಡೆದ ಕಾರಣ ಅಸಮಾಧಾನಗೊಂಡು ವಾಪಸ್ ತೆರಳಿದ ಘಟನೆ ಭಾನುವಾರ ನಡೆಯಿತು.

ಮುಖ್ಯಮಂತ್ರಿ ಬಂದ ವೇಳೆ ಜಲಾಶಯದ ಗೇಟ್‌ನ ಮುಖ್ಯದ್ವಾರದ ಬಳಿ ಹೂಗುಚ್ಛ ನೀಡಿ ಸ್ವಾಗತಿಸಿದ ಅವರು, ಬಾಗಿನ ಕಾರ್ಯಕ್ರಮದಲ್ಲಿ ಭಾಗಿಯಾಗದೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಟಿಬಿ ಡ್ಯಾಂ ಗೇಟ್‌ನ ಮುಖ್ಯದ್ವಾರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಖಾಸಗಿ ವಾಹನಗಳ ಪ್ರವೇಶ ಕೂಡ ನಿರ್ಬಂಧಿಸಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಜಯನಗರ ಶಾಸಕ ಎಚ್.ಆರ್. ಗವಿಯಪ್ಪ ಬೆಂಬಲಿಗರೊಂದಿಗೆ ಬಂದಿದ್ದರು. ಶಾಸಕರ ವಾಹನದ ಹಿಂದೆ ಹತ್ತಕ್ಕೂ ಹೆಚ್ಚು ವಾಹನಗಳಿದ್ದವು. ಕೇವಲ ಶಾಸಕರು ಮತ್ತು ಬೆಂಬಲಿಗರ ಎರಡು ವಾಹನಗಳನ್ನು ಒಳ ಬಿಟ್ಟು ಉಳಿದವುಗಳನ್ನು ಪೊಲೀಸರು ತಡೆದಿದ್ದರು. ಕೂಡ್ಲಿಗಿ ಸಿಪಿಐ ಸುರೇಶ್, ಉಳಿದವರು ವಾಹನಗಳನ್ನು ಹೊರಬಿಟ್ಟು ಸರ್ಕಾರಿ ವಾಹನಗಳಲ್ಲಿ ಹೋಗುವಂತೆ ತಿಳಿಸಿದರು. ಆದರೆ, ಗೇಟ್ ದಾಟಿ ಒಳ ಹೋಗಿದ್ದ ಶಾಸಕ ಎಚ್.ಆರ್. ಗವಿಯಪ್ಪ, ಬೆಂಬಲಿಗರನ್ನು ತಡೆದಿರುವುದನ್ನು ಕಂಡು ವಾಪಸ್ ಹೊರಬಂದು ಪೊಲೀಸರ ವಿರುದ್ಧ ಕೆಂಡಾಮಂಡಲರಾದರು.

"ನೀವೇ ಕಾರ್ಯಕ್ರಮ ಮಾಡ್ಕೊರಿ. ಸ್ಥಳೀಯ ಶಾಸಕ ನಾನು, ಏನ್ ತಿಳ್ಕೊಂಡಿರಿ? ನನ್ನ ಕ್ಷೇತ್ರಕ್ಕೆ ಬಂದು ನನ್ನನ್ನೇ ತಡೆಯುತ್ತೀರಾ " ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿದ ಬೆಂಬಲಿಗರು, ಆಂಧ್ರಪ್ರದೇಶ, ಕೊಪ್ಪಳದವರನ್ನು ಸೇರಿಸಿಕೊಂಡು ಕಾರ್ಯಕ್ರಮ ಮಾಡ್ರಿ. ಮುನಿರಾಬಾದ್ ಕಡೆಯಿಂದ ಒಬ್ಬೊಬ್ಬರ 50 ಕಾರುಗಳನ್ನು ಬಿಟ್ಟಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ ರೈತರ ಕಾರ್ಯಕ್ರಮ ಆಗಿದೆ. ಆದರೆ, ರೈತರನ್ನೇ ಒಳ ಬಿಡದೇ ಕಾರ್ಯಕ್ರಮ ಹೇಗೆ ಮಾಡೋದು? ನಾನಂತೂ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಮುಖ್ಯಮಂತ್ರಿ ಅವರನ್ನು ಸ್ವಾಗತಿಸಿ ಬರುವೆ. ಕ್ಷೇತ್ರದ ರೈತರಿಗೆ ನಾನು ಉತ್ತರಿಸಬೇಕಾಗುತ್ತದೆ. ಪೊಲೀಸರು ಮೊದಲೇ ತಿಳಿಸಬೇಕಿತ್ತು. ಸೌಜನ್ಯದಿಂದ ವರ್ತಿಸಬೇಕಿತ್ತು ಎಂದು ತಮ್ಮ ಬೆಂಬಲಿಗರ ಬಳಿ ಶಾಸಕ ಎಚ್.ಆರ್‌. ಗವಿಯಪ್ಪ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಶಾಸಕರ ಕಚೇರಿಯಲ್ಲೇ ಇದ್ದರೂ ಬಾಗಿನ ಅರ್ಪಣೆ ಕಾರ್ಯಕ್ರಮ ಹಾಗೂ ಮುನಿರಾಬಾದ್‌ನ ಅಭಿನಂದನಾ ಕಾರ್ಯಕ್ರಮಕ್ಕೆ ತೆರಳದೇ ದೂರವೇ ಉಳಿದರು.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?