ರಾತ್ರಿ ಹತ್ತು ಗಂಟೆ ಒಳಗಾಗಿ ಗಣೇಶ ಮೂರ್ತಿ ವಿಸರ್ಜಿಸಿ

KannadaprabhaNewsNetwork | Published : Aug 28, 2024 12:59 AM

ಸಾರಾಂಶ

ತಡರಾತ್ರಿಯವರೆಗೂ ಮೆರವಣಿಗೆಗೆ ಅವಕಾಶವಿಲ್ಲ. ಹೀಗಾಗಿಯೇ ಬೇಗನೆ ಪ್ರಾರಂಭಿಸಿ ರಾತ್ರಿ 10ರ ವೇಳೆಗೆ ಎಲ್ಲರೂ ಗಣೇಶ ವಿಸರ್ಜನೆ ಕಾರ್ಯ ಮುಕ್ತಾಯಗೊಳಿಸಬೇಕು

ಮುಂಡರಗಿ: ಪಟ್ಟಣದಲ್ಲಿ ಪ್ರತಿಷ್ಠಾಪಿಸುವ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ದಿನ ಸಂಜೆ ಬೇಗ ಮೇರವಣಿಗೆ ಪ್ರಾರಂಭಿಸಿ ರಾತ್ರಿ ಹತ್ತು ಗಂಟೆ ಒಳಗಾಗಿ ಎಲ್ಲರೂ ತಮ್ಮ ಕಮೀಟಿಗಳ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು ಎಂದು ಗದಗ ಎಸ್ಪಿ ಬಿ.ಎಸ್.ನೇಮಗೌಡರ ತಿಳಿಸಿದರು.

ಅವರು ಸೋಮವಾರ ಗದಗ ಜಿಲ್ಲಾ ಪೊಲೀಸ್, ನರಗುಂದ ಉಪವಿಭಾಗ, ಮುಂಡರಗಿ ಪೊಲೀಸ್ ಠಾಣೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪಟ್ಟಣದ ಗಾಂಧಿ ಭವನದಲ್ಲಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪಟ್ಟಣದ ಎಲ್ಲ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಒಂದೇ ದಿನ ವಿಸರ್ಜನೆ ಮಾಡಬೇಕು. ತಡರಾತ್ರಿಯವರೆಗೂ ಮೆರವಣಿಗೆಗೆ ಅವಕಾಶವಿಲ್ಲ. ಹೀಗಾಗಿಯೇ ಬೇಗನೆ ಪ್ರಾರಂಭಿಸಿ ರಾತ್ರಿ 10ರ ವೇಳೆಗೆ ಎಲ್ಲರೂ ಗಣೇಶ ವಿಸರ್ಜನೆ ಕಾರ್ಯ ಮುಕ್ತಾಯಗೊಳಿಸಬೇಕು. ತಮಗೆ ಇಲಾಖೆ ನೀಡುವ ಮಾರ್ಗದಿಂದಲೇ ಮೆರವಣಿಗೆ ಹೋಗಬೇಕು. ಹೊಸ ಮಾರ್ಗ ಹುಡುವಂತಿಲ್ಲ. ಈ ಬಾರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಎರಡೂ ಕೂಡಿ ಬಂದಿರುವುದರಿಂದ ಪರಸ್ಪರ ಬಾಂಧವ್ಯದಿಂದ ಆಚರಿಸಬೇಕು.ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಜಾಗೃತಿ ವಹಿಸಬೇಕು.

ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳಲ್ಲಿ ಡಿಜೆ ಹಚ್ಚಲು ಅವಕಾಶ ನಿರಾಕರಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳು ಹಾಗೂ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಠಿಯಿಂದ ಡಿಜೆ ಹಚ್ಚುವುದನ್ನು ನಿಷೇಧಿಸಲಾಗಿದೆ. ಹಬ್ಬದ ಮೊದಲೇ ಡಿಜೆ ಹಚ್ಚುವುದಿಲ್ಲವೆಂದು ಎಲ್ಲ ಸಂಘಟಿಕರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳಬೇಕೆಂದು ಸಿಪಿಐಗೆ ಸೂಚನೆ ನೀಡಿದರು.

ಗಣಪತಿ ಪ್ರತಿಷ್ಠಾಪಿಸುವ ಎಲ್ಲ ಸಂಘಟನೆಗಳು ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಬಳಕೆ ಮಾಡಬೇಕು. ರಾಸಾಯನಿಕ ಮೂರ್ತಿ ಕೊಳ್ಳುವುದನ್ನೂ ಸಹ ನಿಷೇಧಿಸಲಾಗಿದೆ. ಮುಂದಿನ ವರ್ಷಕ್ಕೆ ಇಡೀ ಪಟ್ಟಣದ ಎಲ್ಲ ಗಣೇಶ ಸಂಘಟನೆಗಳನ್ನು ಕೂಡಿಸಿ ಎಲ್ಲರೂ ಸೇರಿ ಒಂದೆಡೆ ಪ್ರತಿಷ್ಠಾಪಿಸಲು ಯೋಚಿಸೋಣ. ಎಲ್ಲರೂ ಸೇರಿ 5 ದಿನಗಳ ಕಾಲ ನಮ್ಮ ನಾಡು ನುಡಿಗಾಗಿ ಹೋರಾಟ ಮಾಡಿದ ಸ್ಮರಣೀಯರನ್ನು ನೆನೆಯುತ್ತ ನಿತ್ಯ ಒಂದೊಂದು ಕಾರ್ಯಕ್ರಮ ಮಾಡುವ ಮೂಲಕ ನಮ್ಮ ದೇಶ ಕಲೆ, ಸಾಹಿತ್ಯ ಸಂಗೀತ, ಕ್ರೀಡೆಗಳನ್ನು ಪ್ರೋತ್ಸಾಹಿಸೋಣ ಎಂದರು.

ತಹಸೀಲ್ದಾರ್‌ ಯರ್ರಿಸ್ವಾಮಿ ಮಾತನಾಡಿ, ಮುಂಡರಗಿ ಪಟ್ಟಣದಲ್ಲಿ ಹಿಂದಿನಿಂದಲೂ ಎಲ್ಲ ಹಬ್ಬಗಳು ಶಾಂತಿ ಹಾಗೂ ಸುವ್ಯವಸ್ಥೆಯಿಂದ ನಡೆದುಕೊಂಡು ಬಂದಿದ್ದು, ಈಗಲೂ ಹಾಗೆ ಜರುಗಲು ಎಲ್ಲರೂ ಸಹಕರಿಸಬೇಕು. ಗಣೇಶ ಹಬ್ಬದಲ್ಲಿ ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮ ಮಾಡಬೇಕು. ಉದ್ದೇಶ ಪೂರ್ವಕವಾಗಿ ಶಾಂತಿ ಕದಡುವ ಕಾರ್ಯಕ್ಕೆ ಯಾರೊಬ್ಬರೂ ಮುಂದಾಗಬಾರದು. ನಿಮ್ಮ ಉತ್ಸಾಹ ನಿಮ್ಮಗಳ ಕುಟುಂಬದ ದುಃಖಕ್ಕೆ ಕಾರಣವಾಗಬಾರದು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಹಬ್ಬ ಆಚರಣೆಗೆ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಸದಸ್ಯರಾದ ಪ್ರಹ್ಲಾದ್ ಹೊಸಮನಿ, ರಾಜಾಭಕ್ಷಿ ಬೆಟಗೇರಿ ಸೇರಿದಂತೆ ಅನೇಕರು ಮಾತನಾಡಿದರು. ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಸದಸ್ಯ ನಾಗರಾಜ ಹೊಂಬಳಗಟ್ಟಿ, ಶಿವಪ್ಪ ಚಿಕ್ಕಣ್ಣವರ, ತಾಪಂ ಇಓ ವಿಶ್ವನಾಥ ಹೊಸಮನಿ, ಸಿಪಿಐ ಮಂಜುನಾಥ ಕುಸೂಗಲ್, ಅಬಕಾರಿ ಇಲಾಖೆ, ಹೆಸ್ಕಾಂ ಇಲಾಖೆ, ಪುರಸಭೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಅಂಜುಮನ್ ಎ ಇಸ್ಲಾಂ ಕಮೀಟಿ ಅಧ್ಯಕ್ಷ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪಿ.ಎಸ್.ಐ. ವಿ.ಜಿ. ಪವಾರ ನಿರೂಪಿಸಿದರು.

Share this article