ಕಲುಷಿತ ನೀರು ಸೇವನೆ: ಇಬ್ಬರು ವೃದ್ಧೆಯರು ಸಾವು

KannadaprabhaNewsNetwork |  
Published : Aug 28, 2024, 12:59 AM IST
೨೭ಕೆಎಂಎನ್‌ಡಿ-೩ ಮತ್ತು ೪ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡು ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರು. | Kannada Prabha

ಸಾರಾಂಶ

ಕಲುಷಿತ ನೀರು ಸೇವನೆಯಿಂದ ಇಬ್ಬರು ಮಹಿಳೆಯರು ಸಾವನ್ನಪ್ಪಿ, ೧೨ ಮಂದಿ ತೀವ್ರ ಅಸ್ವಸ್ಥರಾಗಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಭಾರತೀಪುರ ಕ್ರಾಸ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾರೇನಹಳ್ಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಲುಷಿತ ನೀರು ಸೇವನೆಯಿಂದ ಇಬ್ಬರು ಮಹಿಳೆಯರು ಸಾವನ್ನಪ್ಪಿ, ೧೨ ಮಂದಿ ತೀವ್ರ ಅಸ್ವಸ್ಥರಾಗಿರುವ ಘಟನೆ ತಾಲೂಕಿನ ಭಾರತೀಪುರ ಕ್ರಾಸ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾರೇನಹಳ್ಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಮಾರೇನಹಳ್ಳಿ ಗ್ರಾಮದ ಜವರಮ್ಮ (೯೦) ಮತ್ತು ಚಿಕ್ಕಮ್ಮ (೭೫) ಕಲುಷಿತ ನೀರಿನ ಸೇವನೆಯಿಂದ ಮೃತಪಟ್ಟಿದ್ದರೆ, ಇದೇ ಗ್ರಾಮದ ಮಾಕಮ್ಮ (೬೦), ನಿಂಗೇಗೌಡ (೭೦), ಸಣ್ಣಮ್ಮ (೫೦) ಎಂಬುವರು ಹಾಸನದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ವಾಂತಿ-ಭೇದಿಯಿಂದ ತೀವ್ರ ನಿಶಕ್ತಿಗೆ ಒಳಗಾಗಿರುವ ಮಾರೇನಹಳ್ಳಿಯ ನಾಗಮ್ಮ (೭೦), ಕಲ್ಲೇಶ್ ಎನ್ನುವವರು ಕುಟುಂಬಕ್ಕೆ ಸೇರಿದ ಮೂವರು ಹಾಸನದ ಜಿಲ್ಲಾ ಕೆಂದ್ರ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಕಲುಷಿತ ನೀರು ಕಾರಣ: ಹಾಸನ ವೈದ್ಯರು

ಗ್ರಾಮಕ್ಕೆ ಕೊಳವೆ ಬಾವಿಯ ಮೂಲಕ ಸರಬರಾಜಾಗುತ್ತಿರುವ ನೀರಿನಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ, ಗ್ರಾಮ ಪಂಚಾಯ್ತಿಯ ಕಿರು ನೀರು ಸರಬರಾಜು ಘಟಕದ ಮೂಲಕ ಪೂರೈಕೆ ಮಾಡುತ್ತಿರುವ ನೀರನ್ನು ಕುಡಿದ ಗ್ರಾಮಸ್ಥರು ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದಾರೆ. ಕಲುಷಿತ ನೀರಿನ ಸೇವನೆಯೇ ವಾಂತಿ-ಭೇದಿಗೆ ಕಾರಣ ಎಂದು ಹಾಸನದ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆಂದು ಹೇಳಿರುವ ಗ್ರಾಮಸ್ಥರು, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಾಂತಿ-ಭೇದಿಯಿಂದ ನರಳಿ ಸತ್ತಿರುವ ಇಬ್ಬರು ವಯೋವೃದ್ಧರು ವಯೋಸಹಜವಾಗಿ ಮೃತಪಟ್ಟಿದ್ದಾರೆಂದು ಕಲುಷಿತ ನೀರಿನ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ದೂರಿದ್ದಾರೆ.

ಸಾವಿಗೆ ಕುಡಿವ ನೀರು ಕಾರಣವಲ್ಲ:

ಪ್ರಕರಣದ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿರುವ ತಾಲೂಕು ವೈದ್ಯಾಧಿಕಾರಿ ಡಾ.ಅಜಿತ್, ಇಬ್ಬರು ವಯೋವೃದ್ಧರ ಸಾವಿಗೆ ವಾಂತಿ-ಭೇದಿ ಕಾರಣವಲ್ಲ. ಜವರಮ್ಮ ಅನಾರೋಗ್ಯದಲ್ಲಿದ್ದು ವಯೋಸಹಜ ಕಾರಣಗಳಿಂದ ಮೃತಪಟ್ಟಿದ್ದಾರೆ. ಅವರದೇ ಮನೆಯಲ್ಲಿದ್ದ ಕುಂದೂರಿನ ಚಿಕ್ಕಮ್ಮ ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದರು. ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಕಳುಹಿಸಿದ್ದು ಆನಂತರ ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ. ಉಳಿದ ನಾಲ್ಕಾರು ಜನ ಅತಿಸಾರಕ್ಕೆ ತುತ್ತಾಗಿ ಹಾಸನದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಹಾಸನದ ಜಿಲ್ಲಾ ಆಸ್ಪತ್ರೆಯ ವೈದ್ಯರೊಂದಿಗೆ ನಾನು ನಿತ್ಯ ಸಂಪರ್ಕದಲ್ಲಿದ್ದೇನೆ. ಸುದ್ದಿ ತಿಳಿದ ಕೂಡಲೇ ನಮ್ಮ ವೈದ್ಯಕೀಯ ಸಿಬ್ಬಂದಿಯೊಂದಿಗೆ ಮಾರೇನಹಳ್ಳಿಗೆ ಹೋಗಿ ಪರಿಶೀಲನೆ ಮಾಡಲಾಗಿದೆ.

ಕುಡಿಯಲು ಯೋಗ್ಯವೆಂಬ ವರದಿ: ತಾಲೂಕು ವೈದ್ಯಾಧಿಕಾರಿ

ಗ್ರಾಮದ ಕುಡಿಯುವ ನೀರು ಪೂರೈಕೆ ಘಟಕದ ನೀರು ಮತ್ತು ಮನೆ ಮನೆಯ ನಲ್ಲಿ ನೀರಿನ ಸ್ಯಾಂಪಲ್ ಪಡೆದು ಪ್ರಯೋಗಾಲಕ್ಕೆ ಕಳುಹಿಸಿ ವರದಿ ತರಿಸಿದ್ದು ಗ್ರಾಮಕ್ಕೆ ಪೂರೈಕೆಯಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿದೆ ಎನ್ನುವ ವರದಿ ಬಂದಿದೆ. ಅನಾರೋಗ್ಯಕ್ಕೆ ತುತ್ತಾದವರು ಬೇರೆ ಕಡೆ ನೀರು ಹಾಗೂ ಆಹಾರ ಸೇವಿಸಿ ಅತಿಸಾರ ಹಾಗೂ ವಾಂತಿಗೆ ತುತ್ತಾಗಿರುವಂತಿದೆ. ಗ್ರಾಮಕ್ಕೆ ಹೊಂದಿಕೊಂಡಿರುವ ಕುಂದೂರು ಮತ್ತು ಭಾರತೀಪುರ ಕ್ರಾಸ್ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮಕ್ಕೆ ನಿತ್ಯ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ. ಗ್ರಾಮದ ಪ್ರತಿಯೊಂದು ಮನೆಗೂ ಅಗತ್ಯ ಮಾತ್ರೆಗಳು ಮತ್ತು ಓಆರ್‌ಎಸ್ ಪೌಡರ್ ಪೂರೈಕೆ ಮಾಡಿದ್ದು ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಅಜಿತ್ ಹೇಳಿದ್ದಾರೆ.

ನೀರಿನ ವರದಿ ಬಂದಿಲ್ಲ: ಪಿಡಿಒ

ಗ್ರಾಮದಲ್ಲಿನ ಯುವ ಜನಾಂಗದಲ್ಲಿ ಇಂತಹ ಸಮಸ್ಯೆಯಿಲ್ಲ. ಆದರೆ, ವಯಸ್ಸಾದವರಲ್ಲಿ ನಿರ್ಜಲೀಕರಣ ಸಮಸ್ಯೆ ಕಂಡು ಬಂದಿದೆ ಎಂದಿರುವ ಭಾರತೀಪುರ ಕ್ರಾಸ್ ಪಿಡಿಒ ದಿನೇಶ್, ಗ್ರಾಮದ ಕುಡಿಯುವ ನೀರು ಪೂರೈಕೆ ಜಾಲದ ಸಮಗ್ರ ಪರಿಶೀಲನೆ ಮಾಡಲಾಗಿದೆ. ಕುಡಿಯುವ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು ವರದಿಗಾಗಿ ಕಾಯಲಾಗುತ್ತಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ