ಕನ್ನಡಪ್ರಭ ವಾರ್ತೆ ಗಂಗಾವತಿ
ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ಭಾನುವಾರ ಹನುಮಮಾಲೆ ವಿಸರ್ಜನೆ ಭಕ್ತಿ ಶ್ರದ್ಧೆಯಿಂದ ನಡೆಯಿತು.ಜೈ ಶ್ರೀರಾಮ್, ಜೈ ಹನುಮಾನ್ ಎಂಬ ಜೈಕಾರ ಹಾಕುತ್ತ ತೆರಳಿ ಹನುಮಮಾಲೆ ವಿಸರ್ಜಿಸಿದರು. ಹನುಮದ್ ವ್ರತ ಅಂಗವಾಗಿ ಆಂಜನೇಯಸ್ವಾಮಿಗೆ ವಿಶೇಷ ಅಲಂಕಾರ, ನೈವೇದ್ಯ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನದ ಆವರಣದಲ್ಲಿ ಪವಮಾನ ಹೋಮ ಜರುಗಿತು.
ಕಳೆದ ಮೂರು ದಿನಗಳಿಂದ ಅಂಜನಾದ್ರಿಯಲ್ಲಿ ನಡೆಯುತ್ತಿರುವ ಹನುಮಮಾಲಾ ವಿಸರ್ಜನೆಗೆ ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿತ್ತು. ಬರುವ ಭಕ್ತರಿಗೆ ಸಂಚಾರ ವ್ಯವಸ್ಥೆ ಪಾರ್ಕಿಂಗ್ ಮತ್ತು ಜಾಗೃತಿ ವಹಿಸುವಂತೆ ಸೂಚಿಸಿದ್ದರು.ಪ್ರಮುಖರ ಆಗಮನ:
ಅಂಜನಾದ್ರಿ ಬೆಟ್ಟಕ್ಕೆ ಸಚಿವ ಶಿವರಾಜ ತಂಗಡಗಿ, ಸಂಸದ ಕರಡಿ ಸಂಗಣ್ಣ, ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿಪಂ ಮಾಜಿ ಸದಸ್ಯ ಎಚ್.ಎಂ. ಸಿದ್ದರಾಮಸ್ವಾಮಿ, ಸಂತೋಷ ಕೆಲೋಜಿ, ಬಜರಂಗ ದಳದ ಪ್ರಮುಖರಾದ ಸೂರ್ಯನಾರಾಯಣ, ಶಂಕರ ನಾಯ್ಕರ್, ಪುಂಡಲೀಕ ದಳವಾಯಿ, ಸುಭಾಸ್, ಜಿಲ್ಲಾಧಿಕಾರಿ ನಳಿನ್ ಅತುಲ್, ಎಸ್ಪಿ ಯಶೋದಾ ವಂಟಿಗೋಡಿ, ಸಹಾಯಕ ಆಯುಕ್ತ ಕ್ಯಾ. ಮಹೇಶ ಮಾಲಗಿತ್ತಿ, ದೇವಸ್ಥಾನದ ಆಡಳಿತಾಧಿಕಾರಿ ಅರವಿಂದ ಸುತುಗುಂಡಿ, ತಹಸೀಲ್ದಾರ್ ವಿಶ್ವನಾಥ ಹಾಗೂ ಇತರ ಅಧಿಕಾರಿಗಳು ಆಗಮಿಸಿದ್ದರು.ಭಕ್ತರ ಕೈಯಲ್ಲಿ ಮೋದಿ, ವೀರ ಸಾವರ್ಕರ ಭಾವಚಿತ್ರ
ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇಗುಲಕ್ಕೆ ಹನುಮಮಾಲೆ ವಿಸರ್ಜನೆಗೆ ತೆರಳುತ್ತಿದ್ದ ಭಕ್ತರ ಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಭಾವಚಿತ್ರ ಕಂಡುಬಂದಿತು.ವಿವಿಧ ರಾಜ್ಯಗಳಿಂದ ಹನುಮಮಾಲೆ ವಿಸರ್ಜನೆಗೆ ಆಗಮಿಸಿದ್ದ ಭಕ್ತರಿಂದ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಬೇಕೆಂಬ ಕೂಗು ಕೇಳಿ ಬಂತು. ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಫೋಟೋ ಪ್ರದರ್ಶಿಸಿದರು.
ಅಂಜನಾದ್ರಿ ಬೆಟ್ಟ ಏರಿದ ಹನುಮ ಮಾಲಾಧಾರಿಗಳು ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕೆಂದು ಆಂಜನೇಯಸ್ವಾಮಿಗೆ ಪ್ರಾರ್ಥಿಸುತ್ತೇವೆ ಎಂದು ಹೇಳಿದರು. ಆನಂತರ ಆಂಜನೇಯ ಸ್ವಾಮಿಯ ಮುಂದೆ ಮೋದಿ ಭಾವಚಿತ್ರ ಇಟ್ಟು ಪ್ರಾರ್ಥಿಸಿದರು.