ಕನ್ನಡಪ್ರಭ ವಾರ್ತೆ ತಾಳಿಕೋಟೆ
ತಾಲೂಕಿನ ಕಲಕೇರಿ ಸೇರಿದಂತೆ ಸುತ್ತಲಿನ ಬಹುತೇಕ ಹಳ್ಳಿಗಳಲ್ಲಿ ರೈತರು ವಾಣಿಜ್ಯ ಬೆಳೆ ತೊಗರಿಯನ್ನೇ ಹೆಚ್ಚಾಗಿ ಬೆಳೆದಿದ್ದಾರೆ. ಆದರೀಗ ಹೂವು ಉದುರಿ ಕಾಳು ಕಟ್ಟದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಕಳಪೆ ಬೀಜ ವಿತರಣೆಯೇ ಮುಖ್ಯ ಕಾರಣವಾಗಿದ್ದು ಕೂಡಲೇ ಕಂಪನಿಯ ಮೇಲೆ ಸೂಕ್ತ ಕ್ರಮ ಕೈಗೊಂಡು ಹಾನಿಗೀಡಾದ ಬೆಳೆಗಳಿಗೆ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿ, ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.ಕೃಷಿ ಇಲಾಖೆಯಿಂದ ಕೊಟ್ಟಿರುವ ತೊಗರಿ ಬೀಜ ಜಿ.ಆರ್.ಜಿ ೧೫೨ ಹಾಗೂ ೮೧೧ ಸಂಪೂರ್ಣ ಕಳಪೆಯಾಗಿದೆ. ಹೀಗಾಗಿ ಗಿಡಗಳು ಬೀಜ ಕಟ್ಟಿಲ್ಲ. ಸಹಜವಾಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ಮೊದಲೇ ರೈತರು ಕೃಷಿಗೆ ಮಾಡಿರುವ ಸಾಲ ತೀರಿಸಲಾಗದೇ ರೈತರು ಚಿಂತೆಗೀಡಾಗಿದ್ದಾರೆ. ಈಗ ಕಳಪೆ ತೊಗರಿ ಬೀಜ ವಿತರಣೆ ಮಾಡಿರುವುದರಿಂದ ಬೆಳೆ ಕೂಡ ಬರುವುದಿಲ್ಲ. ಹೀಗಾಗಿ ರೈತರಿಗೆ ಮತ್ತಷ್ಟು ಹಾನಿಯಾಗಲಿದೆ. ಏಜೆನ್ಸಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ರೈತರಿಗೆ ಬೀಜ ವಿತರಿಸುವಾಗ ಸರಿಯಾದ ಮಾಹಿತಿ ನೀಡಬೇಕು. ಬೆಳೆ ಹಾಳಾದ ಮೆಲೆ ರೈತರನ್ನೇ ಆರೋಪಿಯಾಗಿ ಮಾಡುವುದು ಸರಿಯಲ್ಲ. ಕಳಪೆ ಬೀಜ ವಿತರಿಸಿದ ಕಂಪನಿಯ ವಿರುದ್ಧ ಹಾಗೂ ಇದಕ್ಕೆ ಬೆಂಬಲ ನೀಡಿದ ಅಧಿಕಾರಿಗಳ ಮೇಲೂ ಸೂಕ್ತ ಕ್ರಮ ಜರುಗಿಸಬೇಕು. ನಷ್ಟಗೊಂಡ ರೈತರಿಗೆ ಬೆಳೆ ಪರಿಹಾರ ಅಥವಾ ಬೆಳೆ ವಿಮೆ ನೀಡುವಲ್ಲಿ ಏನಾದರೂ ಗೊಲಮಾಲ್ ಮಾಡಿದ್ದೆ ಆದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹೋರಾಟ ಅನಿವಾರ್ಯವಾಗಲಿದೆ ಎಂದು ಸಲ್ಲಿಸಿದ ಮನವಿ ಪತ್ರದಲ್ಲಿ ಎಚ್ಚರಿಸಲಾಗಿದೆ.ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಉಪ ತಹಶೀಲ್ದಾರ ಜೆ.ಐ.ತುಬಾಕೆ ಅವರಿಗೆ ಕೃಷಿ ಜಂಟಿ ನಿರ್ದೇಶಕರಿಗೆ ಬರೆದ ಮನವಿ ಪತ್ರವನ್ನು ಕೃಷಿ ಅಧಿಕಾರಿಗಳಾದ ಎಂ.ಎಚ್.ಬೀಳಗಿ ಅವರಿಗೆ ಸಲ್ಲಿಸಿದರು.
ಈ ಸಮಯದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ತಾಳಿಕೋಟೆ ತಾಲೂಕು ಅಧ್ಯಕ್ಷ ಶ್ರೀಶೈಲ ವಾಲಿಕಾರ, ಸುಜಾತಾ ಅವಟಿ, ವಿಮಲಾ ಹಿರೇಮಠ, ಜನ್ನತ್‌ಬಿ ಮುಲ್ಲಾ ರೈತ ಮುಖಂಡರಾದ ಗೌಡಪ್ಪ ಬಿರಾದಾರ, ಸಂಗಪ್ಪ ಬೈಚಬಾಳ, ಮುನೀರ ಯಾಳವಾರಕರ್, ಆಶ್ಪಕ್ ಅತ್ತಾರ, ಶಿವಾನಂದ ಕಾದಳ್ಳಿ, ಶರಣು ಕೌದಿ, ಈರಯ್ಯ ಗದ್ಗಿಮಠ, ಗುರಣ್ಣ ಕಡಕೋಳ, ಬಸವರಾಜ ಪೂಜಾರಿ, ಬಸಪ್ಪ ಬೈಚಬಾಳ, ಮಹಾಂತಯ್ಯ ಕಪ್ಪಡಿಮಠ, ಸಿದ್ದಣ್ಣ ಚಳ್ಳಗಿ, ಅಲ್ಲಾಭಕ್ಷ ಹೊನ್ನಳ್ಳಿ, ರಮೇಶ ಹೆಂಡಿ, ಗಿರಿಶ ಹೆಗ್ಗಣದೊಡ್ಡಿ, ರಾಮು ದೇಸಾಯಿ, ದೇವಿಂದ್ರ ಗಡಗಿ ಮೊದಲಾದವರು ಇದ್ದರು.