ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಕೃಷಿ ನಿರ್ದೇಶಕರ ಕಚೇರಿಯಲ್ಲಿ 2024-25ನೇ ಸಾಲಿನ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಮುಂಗಾರು ಚುರುಕುಗೊಂಡಿದೆ. ರೈತರು ಜಮೀನುಗಳನ್ನು ಬಿತ್ತನೆ ಕಾರ್ಯಕ್ಕೆ ಸಿದ್ಧಗೊಳಿಸಿ ವಿವಿಧ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ ಎಂಜದರು.
ರೈತರಿಗೆ ಅವಶ್ಯಕವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆಯಾಗದಂತೆ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳಿಗೆ ಯಾವುದೇ ಕೊರತೆಯಿಲ್ಲ. ಅವುಗಳು ಅಗತ್ಯ ವಸ್ತು ಕಾಯ್ದೆಯಡಿ ಬರುವುದರಿಂದ ಅವುಗಳನ್ನು ಪಾರದರ್ಶಕವಾಗಿ ಮತ್ತು ಸಮರ್ಪಕವಾಗಿ ಸಮಗ್ರ ಪೋಷಕಾಂಶಗಳ ಬಳಕೆ ಬಗ್ಗೆ ರೈತರಿಗೆ ಒತ್ತು ನೀಡಿ ಮಾರಾಟ ಮಾಡುವುದರ ಜೊತೆಗೆ ಇಲಾಖೆಗೆ ವಹಿವಾಟಿನ ವರದಿಯನ್ನು ಕಾಲಕಾಲಕ್ಕೆ ಸಲ್ಲಿಸುವಂತೆ ಸೂಚಿಸಿದರು.ಕೃಷಿ ಇಲಾಖೆ ಉಪನಿರ್ದೇಶಕಿ ಕೆ.ಮಾಲತಿ ಮಾತನಾಡಿ, ಋತುಮಾನಕ್ಕೆ ಹಾಗೂ ತಾಲೂಕಿಗೆ ಸೂಕ್ತವಾದ ಮತ್ತು ಪರವಾನಗಿಯಲ್ಲಿ ಧೃಡಿಕರಿಸಲ್ಪಟ್ಟ ಅಧಿಕ ಇಳುವರಿ ಭತ್ತದ ತಳಿಗಳನ್ನು ಮಾತ್ರ ಮಾರಾಟ ಮಾಡಬೇಕು. ರಸಗೊಬ್ಬರ ಮಾರಾಟದಲ್ಲಿ ಕೃತಕ ಅಭಾವ ಸೃಷ್ಟಿಸದಂತೆ ಎಚ್ಚರವಹಿಸಬೇಕು. ರೈತರಿಗೆ ರಸೀದಿ ನೀಡಿ ಮಾರಾಟ ಮಾಡಬೇಕು ಎಂದರು.
ಇದೇ ವೇಳೆ ಕೃಷಿ ಅಧಿಕಾರಿಗಳಾದ ರೂಪಶ್ರೀ, ದಯಾನಂದ್, ಭವಾನಿ, ಕೃಷ್ಣೇಗೌಡ, ಕರುಣ, ಕೆಂಪೇಗೌಡ, ಶೈಲಜಾ, ಇಪ್ಕೋ ಸಂಸ್ಥೆ ಡ್ರೋನ್ ತಂತ್ರಜ್ಞ ಧನರಾಜ್ ಸೇರಿದಂತೆ ಇತರರಿದ್ದರು.