2 ಸಾವಿರಕ್ಕೂ ಅಧಿಕ ಮಾಲೀಕರಿಗೆ ಇ-ಖಾತೆ ವಿತರಣೆ

KannadaprabhaNewsNetwork | Published : Jun 30, 2025 12:34 AM

ರಾಮನಗರ: ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಇ-ಖಾತೆಗಳನ್ನು ಸ್ವತ್ತಿನ ಮಾಲೀಕರಿಗೆ ವಿತರಣೆ ಮಾಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ತಿಳಿಸಿದರು.

ರಾಮನಗರ: ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಇ-ಖಾತೆಗಳನ್ನು ಸ್ವತ್ತಿನ ಮಾಲೀಕರಿಗೆ ವಿತರಣೆ ಮಾಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ತಿಳಿಸಿದರು.

ನಗರಸಭೆಯ ಆವರಣದಲ್ಲಿ ಆಸ್ತಿ ಮಾಲೀಕರಿಗೆ ಖಾತೆಗಳನ್ನು ವಿತರಿಸಿ ಮಾತನಾಡಿದ ಅವರು, ತಾಂತ್ರಿಕ ಸಮಸ್ಯೆ ಗಳಿಂದಾಗಿ 200ರಿಂದ 300 ಖಾತೆಗಳು ಆಯುಕ್ತರ ಲಾಗಿನ್‌ನಲ್ಲಿವೆ. ಆದರೆ, ಸರ್ವರ್ ಸಮಸ್ಯೆಯಿಂದಾಗಿ ವಿಲೇ ಮಾಡಲಾಗುತ್ತಿಲ್ಲ. ನಾವು ನಿಗಧಿ ಮಾಡಿದ ಅವಧಿಯಲ್ಲಿ ಖಾತೆಗಳನ್ನು ವಿತರಿಸಲು ತಾಂತ್ರಿಕ ಸಮಸ್ಯೆಗಳೇ ಅಡ್ಡಿಯಾಗುತ್ತಿವೆ. ಆದರೂ 2 ಸಾವಿರ ಖಾತೆಗಳನ್ನು ವಿತರಿಸಿದ್ದೇವೆ ಎಂದರು.

ಬಿ-ಖಾತೆಗಳಿಗಾಗಿ ಅರ್ಜಿ ಸಲ್ಲಿಕೆಗೆ ಸರ್ಕಾರ ಗಡುವು ವಿಸ್ತರಿಸಿದೆ. ಬಿ - ಖಾತೆಗಳಿಗಾಗಿ ನಾಗರೀಕರು ಸುಮಾರು 3 ಸಾವಿರ ಅರ್ಜಿಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಸಲ್ಲಿಕೆ ಯಾಗಿರುವುದು 1200 ಅರ್ಜಿಗಳು, ಈ ಪೈಕಿ 920 ಅರ್ಜಿಗಳು ವಿಲೇವಾರಿಯಾಗಿದೆ. ಉಳಿದವುಗಳನ್ನು ಸಧ್ಯದಲ್ಲೇ ವಿಲೇವಾರಿಯಾಗಲಿದೆ ಎಂದು ಹೇಳಿದರು.

ಸರ್ಕಾರದ ಸುತ್ತೋಲೆಯ ಪ್ರಕಾರ ಆಸ್ತಿ ಮಾಲೀಕರು ಇನ್ನು ಮುಂದೆ ಖಾತೆಗಳಿಗಾಗಿ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಇದು ಒಳ್ಳೆಯ ವ್ಯವಸ್ಥೆಯಾಗಿದೆ. ಕರ್ನಾಟಕ ಒನ್ ಮುಂತಾದ ಸೇವಾ ಪರ ಸಂಸ್ಥೆಗಳ ಸಹಯೋಗದಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದರು.

ಈ ವಿಚಾರದಲ್ಲಿ ನಾಗರಿಕರ ಸಹಾಯಕ್ಕೆ ನಗರಸಭೆ ಎಂದೂ ಲಭ್ಯವಿದೆ. ಜನ ಕೂಡ ಹೊಸ ವ್ಯವಸ್ಥೆಗೆ ಸಿದ್ದರಾಗಬೇಕು. ಆನ್‌ಲೈನ್ ಮೂಲಕ ಅರ್ಜಿಗಳು ಸಲ್ಲಿಕೆಯಾದರೆ ಅಧಿಕಾರಿ, ಸಿಬ್ಬಂದಿಯ ಜವಾಬ್ದಾರಿ ಇರುತ್ತದೆ. ಸಮಯವೂ ವ್ಯರ್ಥವಾಗುವುದಿಲ್ಲ ಎಂದು ತಿಳಿಸಿದರು.

ಶ್ರೀ ಬನ್ನಿಮಹಾಕಾಳಿ ಅಮ್ಮನವರ ಕರಗ ಮಹೋತ್ಸವ, ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವಗಳಿಗೆ ಲಕ್ಷಾಂತರ ಜನ ನಗರಕ್ಕೆ ಬರುತ್ತಾರೆ. ಹೀಗಾಗಿ ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ಕೊಡಲು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿದೆ. ಆದರೆ ಕರಗ ಮಹೋತ್ಸವದ ಪ್ರಯುಕ್ತ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಲು ತತ್ಕಾಲಿಕ ಕ್ರಮಗಳನ್ನು ವಹಿಸಲಾಗುತ್ತದೆ, ಈ ವಿಚಾರದಲ್ಲಿ ಕೌನ್ಸಿಲ್ ಸಭೆಯಲ್ಲಿಯೂ ಚರ್ಚಿಸಲಾಗಿದೆ ಎಂದು ತಿಳಿಸಿದರು.

ನಗರ ವ್ಯಾಪ್ತಿಯಲ್ಲಿ ಉತ್ಪತ್ತಿ ಯಾಗುತ್ತಿರುವ ತ್ಯಾಜ್ಯದ ಸಂಸ್ಕರಣೆಗೆ ಸೂಕ್ತ ಸ್ಥಳದ ಕೊರತೆ ಕಾರಣ ಕೆಲವು ವಾರಗಳು ಸಮಸ್ಯೆ ಉಂಟಾಗಿತ್ತು. ಸ್ವಚ್ಚ ರಾಮನಗರಕ್ಕೆ ಸಂಕಲ್ಪಿಸಿದ್ದೇವೆ. ಆದರೆ ಸ್ಥಳದ ಕೊರತೆ ಇದೆ. ಆದರೂ ಈ ವಿಚಾರದಲ್ಲಿ ನಾಗರೀಕರ ಕ್ಷಮೆಯನ್ನು ಯಾಚಿಸುತ್ತಿದ್ದೇನೆ. ವ್ಯವಸ್ಥೆಯ ಸುಧಾರಣೆಗೆ ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂದು ಕೆ.ಶೇಷಾದ್ರಿ ಹೇಳಿದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಆಯೀಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಆರೀಫ್ , ಪಾರ್ವತಮ್ಮ, ಗಿರಿಜಮ್ಮ, ಪೌರಾಯುಕ್ತ ಡಾ.ಜಯಣ್ಣ ಇತರರಿದ್ದರು.

29ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಸ್ವತ್ತಿನ ಮಾಲೀಕರಿಗೆ ಇ-ಖಾತೆಗಳನ್ನು ವಿತರಿಸಿದರು.