ಮಳೆ ಬರುವವರೆಗೂ ಮೇವು ವಿತರಣೆ: ಗೋಟೂರು ಶಿವಪ್ಪ

KannadaprabhaNewsNetwork |  
Published : May 03, 2024, 01:01 AM IST
ವೈ.ಎನ್. ಹೊಸಕೋಟೆ | Kannada Prabha

ಸಾರಾಂಶ

ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಜಿಲ್ಲೆಯ ಪಾವಗಡ ತಾಲೂಕು ವೈ.ಎನ್. ಹೊಸಕೋಟೆಯಲ್ಲಿ ಗುರುವಾರ ಮೇವು ಬ್ಯಾಂಕ್ ಪ್ರಾರಂಭಿಸಲಾಗಿದ್ದು, ಮಳೆ ಬರುವವರೆಗೂ ಮೇವು ವಿತರಣೆ ಮಾಡಲಾಗುವುದು. ರೈತರು ಆತಂಕ ಪಡಬಾರದು

ಕನ್ನಡಪ್ರಭ ವಾರ್ತೆ ತುಮಕೂರುಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಜಿಲ್ಲೆಯ ಪಾವಗಡ ತಾಲೂಕು ವೈ.ಎನ್. ಹೊಸಕೋಟೆಯಲ್ಲಿ ಗುರುವಾರ ಮೇವು ಬ್ಯಾಂಕ್ ಪ್ರಾರಂಭಿಸಲಾಗಿದ್ದು, ಮಳೆ ಬರುವವರೆಗೂ ಮೇವು ವಿತರಣೆ ಮಾಡಲಾಗುವುದು. ರೈತರು ಆತಂಕ ಪಡಬಾರದು ಎಂದು ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ತಿಳಿಸಿದರು. ವೈ.ಎನ್. ಹೊಸಕೋಟೆ ಗ್ರಾಮದ ಉಣ್ಣೆ ಮತ್ತು ರೇಷ್ಮೆ ನೇಕಾರರ ಸಹಕಾರ ಸಂಘದ ಆವರಣದಲ್ಲಿ ಮೇವು ಬ್ಯಾಂಕ್‌ನ್ನು ಉದ್ಘಾಟಿಸಿ ಮಾತನಾಡಿದರು. ಪಾವಗಡ ತಾಲೂಕಿನಲ್ಲಿ ನಾಗಲಮಡಿಕೆ ಸೇರಿ 2 ಮೇವು ಬ್ಯಾಂಕ್‌ ತೆರೆದು ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ರೈತರ ಬೇಡಿಕೆಯಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮೇವು ಬ್ಯಾಂಕ್ ಪ್ರಾರಂಭಿಸಲು ನಿರ್ದೇಶನ ನೀಡಿದ್ದರಿಂದ ಮೇವು ಬ್ಯಾಂಕ್‌ನ್ನು ಪ್ರಾರಂಭಿಸಲಾಗಿದೆ ಎಂದರು.

ಎಲ್ಲ ಜಾನುವಾರುಗಳಿಗೆ ಸಾಕಾಗುವಷ್ಟು ಮೇವನ್ನು ತರಿಸಲಾಗಿದ್ದು, ರೈತರು ತಮ್ಮ ಜಾನುವಾರುಗಳಿಗೆ ಮೇವನ್ನು ಪಡೆಯಬೇಕು. ಪ್ರತಿ ಕೆಜಿ ಮೇವಿಗೆ 2 ರು.ದರ ನಿಗದಿಯಾಗಿದೆ. ಒಂದು ಜಾನುವಾರಿಗೆ ದಿನಕ್ಕೆ 6 ಕೆಜಿಯಂತೆ ಒಂದು ವಾರಕ್ಕಾಗುವಷ್ಟು ಮೇವನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ಜಾನುವಾರುಗಳ ಮೇವಿಗೆ ಸಮಸ್ಯೆಯಾಗಬಾರದೆಂಬ ಉದ್ದೇಶದಿಂದ ಚುನಾವಣೆ ನಡುವೆಯೂ ನಾಗಲಮಡಿಕೆಯಲ್ಲಿ ಮೇವು ಬ್ಯಾಂಕ್‌ನ್ನು ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿಯೇ ಮೊದಲ ಮೇವು ಬ್ಯಾಂಕ್ ಇದಾಗಿದೆ. ಕುರಿ-ಮೇಕೆಗಳಿಗೆ ರೈತರಿಂದ ಮೇವಿನ ಬೇಡಿಕೆ ಬಂದರೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ರೈತರು ಪಶು ಸಂಗೋಪನಾ ಇಲಾಖೆಯಿಂದ ಪಡೆದಿರುವ ಮೇವು ವಿತರಣಾ ಕಾರ್ಡ್‌ನ್ನು ಹಾಜರುಪಡಿಸಿ ತಮ್ಮ ಜಾನುವಾರುಗಳಿಗೆ ಮೇವನ್ನು ಪಡೆಯಬಹುದು. ಪಶುವೈದ್ಯ ಇಲಾಖೆಯು ಮೇವಿನ ಗುಣಮಟ್ಟ ಪರಿಶೀಲಿಸಿದ ನಂತರವೇ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಕಳಪೆ ಗುಣಮಟ್ಟದ ಮೇವನ್ನು ವಿತರಣೆ ಮಾಡುವುದಿಲ್ಲ. ಜಾನುವಾರು ಮೇವು ಕಳಪೆ ಗುಣಮಟ್ಟದಿಂದ ಕೂಡಿದ್ದಲ್ಲಿ ಸರಬರಾಜುದಾರರಿಗೆ ಹಿಂದಿರುಗಿಸಲಾಗುವುದು ಎಂದರು. ಪಾವಗಡ ತಾಲೂಕು ತಹಶೀಲ್ದಾರ್ ಸಂತೋಷ್, ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಗಿರೀಶ್‌ಬಾಬು ರೆಡ್ಡಿ, ಸಹಾಯಕ ನಿರ್ದೇಶಕ ಡಾ. ಹೊರಕೇರಪ್ಪ, ಕಂದಾಯ ಇಲಾಖೆ ಸಿಬ್ಬಂದಿ ಸೇರಿದಂತೆ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ