ಕನ್ನಡಪ್ರಭ ವಾರ್ತೆ ಸುತ್ತೂರು
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್ ಮಣ್ಣಿನ ಪರೀಕ್ಷೆಯ ಮಹತ್ವ, ಮಣ್ಣಿನ ಆರೋಗ್ಯ ನಿರ್ವಹಣೆ ಹಾಗೂ ಕಡಿಮೆ ಮಳೆಯ ಪ್ರದೇಶಗಳಿಗೆ ಸೂಕ್ತವಾದ ಪರ್ಯಾಯ ಬೆಳೆಗಳ ಕುರಿತು ರೈತರಿಗೆ ವಿವರವಾದ ಮಾಹಿತಿ ನೀಡಿದರು. ಮಣ್ಣಿನಲ್ಲಿರುವ ಪೋಷಕಾಂಶಗಳ ಲಭ್ಯತೆಯನ್ನು ಅರಿತು ಸಮತೋಲನ ಗೊಬ್ಬರ ಬಳಕೆ ಮಾಡುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ಇಳುವರಿ ಹೆಚ್ಚಿಸಬಹುದು ಎಂದರು.
ಹವಾಮಾನ ವೈಪರೀತ್ಯ ಮತ್ತು ಮಳೆಯ ಅನಿಶ್ಚಿತತೆಯನ್ನು ಎದುರಿಸಲು ಒಣಭೂಮಿ ತೋಟಗಾರಿಕಾ ಬೆಳೆಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.ಬೆಂಗಳೂರು ಕೃಷಿ ಮಾರುಕಟ್ಟೆ ಮತ್ತು ಪರಿಶೀಲನಾ ನಿರ್ದೇಶನಾಲಯದ ಡಾ. ಶಿವಕುಮಾರ್ ಅವರು ಖೇತ್ ಬಚಾವೋ ಅಭಿಯಾನದ ಉದ್ದೇಶಗಳು ಹಾಗೂ ಪ್ರಸ್ತುತ ಕೃಷಿಯಲ್ಲಿ ಮಣ್ಣಿನ ಸಂರಕ್ಷಣೆ ಮತ್ತು ಪುನಶ್ಚೇತನದ ಅಗತ್ಯತೆಯ ಕುರಿತು ರೈತರಿಗೆ ಮಾಹಿತಿ ನೀಡಿದರು. ಕೇಂದ್ರ ಸರ್ಕಾರದ ಮಣ್ಣಿನ ಆರೋಗ್ಯ ಸುಧಾರಣೆಗೆ ಸಂಬಂಧಿಸಿದ ವಿವಿಧ ಯೋಜನೆಗಳ ಕುರಿತು ವಿವರಿಸಿ, ರೈತರು ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಹಸಿರೆಲೆಗೊಬ್ಬರ ಬಳಕೆ, ಜೀವಾಮೃತ, ಘನ ಜೀವಾಮೃತ, ವರ್ಮಿಕಾಂಪೋಸ್ಟ್ ಹಾಗೂ ಇತರೆ ಸಾವಯವ ಪರಿಕರಗಳ ತಯಾರಿಕೆ ಮತ್ತು ಬಳಕೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಹೆಚ್ಚಿಸುವ ಮೂಲಕ ದೀರ್ಘಕಾಲಿಕ ಉತ್ಪಾದಕತೆಯನ್ನು ಕಾಪಾಡಿಕೊಳ್ಳಬಹುದು ಹಾಗೂ ಬೆಣ್ಣೆಹಣ್ಣು ಮತ್ತು ಮಾವಿನ ಬೆಳೆ ಕೃಷಿ ಕುರಿತು ಮಾಹಿತಿ ತಿಳಿಸಿದರು.
ವಿವಿಧ ಬೆಳೆಗಳಲ್ಲಿ ಇವುಗಳನ್ನು ಬಳಸುವ ವಿಧಾನಗಳ ಕುರಿತು ರೈತರಿಗೆ ಪ್ರಾಯೋಗಿಕ ಮಾಹಿತಿ ನೀಡಿದರು.
ಐಸಿಎಆರ್-ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ, ಒಣಭೂಮಿ ಹಾಗೂ ಕಡಿಮೆ ಮಳೆಯ ಪ್ರದೇಶಗಳಲ್ಲಿ ಹೊಸ ಹಣ್ಣಿನ ಬೆಳೆಗಳ ಉತ್ತೇಜನಕ್ಕಾಗಿ ರೈತರಿಗೆ ಉಚಿತವಾಗಿ ವಿವಿಧ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.
ಸಾವಯವ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ರೈತರಿಗೆ ಎಎಂಸಿ ಮತ್ತು ಟ್ರೈಕೊಡರ್ಮಾ ಜೈವಿಕ ಉತ್ಪನ್ನಗಳನ್ನು ಉಚಿತವಾಗಿ ವಿತರಿಸಲಾಯಿತು. ಇವುಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಸುಧಾರಿಸುವುದು, ಬೇರುಗಳ ಬೆಳವಣಿಗೆ ಹೆಚ್ಚುವುದು ಹಾಗೂ ರೋಗನಿರೋಧಕ ಶಕ್ತಿ ವೃದ್ಧಿಯಾಗುವುದು ಎಂದು ರೈತರಿಗೆ ವಿವರಿಸಲಾಯಿತು.