ಅರ್ಹ ಫಲಾನುಭವಿಗಳಿಗೆ ಮನೆ ವಿತರಣೆ: ಶಾಸಕ ಸಿದ್ದು ಸವದಿ

KannadaprabhaNewsNetwork | Published : Mar 3, 2024 1:31 AM

ಸಾರಾಂಶ

ರಬಕವಿ-ಬನಹಟ್ಟಿ ಸರ್ಕಾರಿ ಡಿಪ್ಲೊಮಾ ಕಾಲೇಜು ಹತ್ತಿರ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಶ್ರಯದಲ್ಲಿ ನಿರ್ಮಾಣಗೊಂಡ ಮನೆಗಳ ಹಂಚಿಕೆ ಕಾರ್ಯಕ್ರಮವನ್ನು ಶಾಸಕ ಸಿದ್ದು ಸವದಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಶ್ರಯದಲ್ಲಿ ನಿರ್ಮಾಣಗೊಂಡ ಮನೆಗಳನ್ನು ಪಾರದರ್ಶಕವಾಗಿ ಮತ್ತು ಅರ್ಹರಿಗೆ ಅನ್ಯಾಯವಾಗದಂತೆ ಹಂಚಿಕೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಫಲಾನುಭವಿಗಳು ಸೂಕ್ತ ಮಾರ್ಗದರ್ಶನ ನೀಡಬಹುದಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಶನಿವಾರ ಇಲ್ಲಿನ ಸರ್ಕಾರಿ ಡಿಪ್ಲೊಮಾ ಕಾಲೇಜು ಹತ್ತಿರ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಶ್ರಯದಲ್ಲಿ ನಿರ್ಮಾಣಗೊಂಡ ಮನೆಗಳ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

೪೦೮ ಮನೆಗಳಲ್ಲಿ ಈಗ ೭೨ ಮನೆಗಳನ್ನು ಹಂಚಿಕೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಮನೆಗಳನ್ನು ಜಿ+ ೧ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಚೀಟಿ ಎತ್ತುವ ಮೂಲಕ ಫಲಾನುಭವಿಗಳ ಎದುರಲ್ಲಿಯೇ ಆಯ್ಕೆ ಮಾಡಲಾಗುವುದು. ತೇರದಾಳ ಮತಕ್ಷೇತ್ರದ ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ೫೫೦, ಮಹಾಲಿಂಗಪುರ ಪುರಸಭೆಯಲ್ಲಿ ೫೫೦ ಮನೆಗಳು ಮತ್ತು ತೇರದಾಳ ಪುರಸಭೆಯ ವ್ಯಾಪ್ತಿಯಲ್ಲಿ ೩೦೦ ಮನೆಗಳನ್ನು ನಿರ್ಮಾಣ ಮಾಡಲಾಗುವುದು.

ಮುಂದಿನ ದಿಗಗಳಲ್ಲಿ ಈ ಪ್ರದೇಶದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯ ಮಾಡಲಾಗುವುದು ಮತ್ತು ಕ್ಷೇತ್ರದಲ್ಲಿರುವ ಉಳಿದ ಬಡವರಿಗೆ ಮನೆಗಳನ್ನು ನಿರ್ಮಾಣ ಮಾಡಲು ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿಕೊಳ್ಳಲಾಗುವುದು. ಸರ್ಕಾರದ ಸೌಲಭ್ಯ ಪಡೆದುಕೊಂಡವರು ಅವುಗಳನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಎಂಜಿನಿಯರ್ ಶಿವಾನಂದ ರಾಠೋಡ ಮಾತನಾಡಿದರು. ಪೌರಾಯುಕ್ತ ಜಗದೀಶ ಈಟಿ, ಸಂಜಯ ತೆಗ್ಗಿ, ಶ್ರೀಶೈಲ ಬೀಳಗಿ, ಗೌರಿ ಮಿಳ್ಳಿ, ಶಶಿಕಲಾ ಸಾರವಾಡ, ದೀಪಾ ಕೊಣ್ಣೂರ, ದರ್ಗವ್ವ ಹರಿಜನ, ಜಯಶ್ರೀ ಬಾಗೇವಾಡ, ಯಲ್ಲಪ್ಪ ಕಟಗಿ, ಶಿವಾನಂದ ಬುದ್ನಿ, ವಿಜಯ ಕಲಾಲ, ಮಹಾದೇವ ಕೋಟ್ಯಾಳ ಸೇರಿದಂತೆ ಅನೇಕರು ಇದ್ದರು.

Share this article