ಜಿಲ್ಲಾದ್ಯಂತ ಯೋಜನೆ ಅನುಷ್ಠಾನ: ಜಿಲ್ಲಾ ಪಂಚಾಯಿತಿ ಸಿಇಒ
ಕನ್ನಡಪ್ರಭ ವಾರ್ತೆ ಹಾವೇರಿಮಕ್ಕಳು ಬೆಳಗಿನ ಉಪಹಾರ ಸೇವಿಸುವುದು ಬಹಳ ಮುಖ್ಯವಾಗಿದೆ. ಮಕ್ಕಳ ಆರೋಗ್ಯ, ಸದೃಢತೆ, ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿಯಿಂದ ತೊಡಗಿಸಿಕೊಳ್ಳಲು ಸರ್ಕಾರ ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್ ನೀಡುವ ಯೋಜನೆ ಜಾರಿಗೆ ತಂದಿದೆ. ಜಿಲ್ಲಾದ್ಯಂತ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ್ ಶ್ರೀಧರ್ ಹೇಳಿದರು.
ತಾಲೂಕಿನ ದೇವಗಿರಿ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಗುರುವಾರ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಶಾಲೆಗಳಲ್ಲಿ ಚಿಕ್ಕಿ, ಬಾಳೆಹಣ್ಣು, ಮೊಟ್ಟೆ, ಹಾಲು ಹಾಗೂ ಮಧ್ಯಾಹ್ನ ಬಿಸಿಯೂಟ ಸಹ ನೀಡಲಾಗುತ್ತಿದೆ ಎಂದು ಹೇಳಿದರು.ಮಕ್ಕಳು ಸೊಪ್ಪು, ಹಣ್ಣು, ತರಕಾರಿ ಸೇರಿದಂತೆ ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು. ನಿಮ್ಮ ಆರೋಗ್ಯ ಉತ್ತಮವಾಗಿದ್ದರೆ ಶಿಕ್ಷಣದಲ್ಲಿ ಸಾಧನೆ ಮಾಡಬಹುದು ಎಂದು ಸಲಹೆ ನೀಡಿದರು.
ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಹಾಗಾಗಿ ಶಾಲೆಗೆ ಬರುವವರಿಗೆ ಬೊಕ್ಕೆ ಬದಲಿಗೆ ಪುಸ್ತಕ ನೀಡಬೇಕು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದ್ದು, ಜನ-ಜಾನುವಾರುಗಳಿಗೆ ಮಾರಕವಾಗಿದೆ. ಸ್ವಚ್ಛ ಭಾರತ ಅಭಿಯಾನದಡಿ ಗ್ರಾಮ ಪಂಚಾಯಿತಿಯಿಂದಲೇ ಪ್ಲಾಸ್ಟಿಕ್ ಬಳಕೆ ನಿಲ್ಲಬೇಕು. ಸುತ್ತಮುತ್ತಲಿನ ಪರಿಸರ ಸ್ಬಚ್ಛವಾಗಿಟ್ಟುಕೊಳ್ಳುವ ಮೂಲಕ ಸುಂದರ ಹಾಗೂ ಸ್ವಚ್ಛ ಪರಿಸರಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.ಮಕ್ಕಳಿಂದ ಮಾಹಿತಿ ಪಡೆದ ಸಿಇಒ:
ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ವಿತರಿಸಿ ಮಾತನಾಡುವ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಯಾರ‍್ಯಾರು ಬೆಳಗಿನ ಉಪಹಾರ ಸೇವಿಸಿ ಶಾಲೆಗೆ ಬಂದಿದ್ದೀರಿ, ಯಾರು ಉಪಾಹಾರ ಸೇವಿಸದೇ ಶಾಲೆಗೆ ಬಂದಿರುವುದಾಗಿ ಕೈ ಎತ್ತಿ ಹೇಳಿ ಎಂದಾಗ ಶಾಲೆಯ ಅರ್ಧದಷ್ಟು ವಿದ್ಯಾರ್ಥಿಗಳು ಉಪಾಹಾರ ಸೇವಿಸದೇ ಶಾಲೆಗೆ ಬಂದಿರುವುದಾಗಿ ಕೈ ಎತ್ತಿದರು.ಈ ಸಂದರ್ಭದಲ್ಲಿ ಬೆಳಗಿನ ಕಲಿಕೆಗೆ ಉಪಾಹಾರದ ಮಹತ್ವ ಕುರಿತಂತೆ ವಿವರಿಸಿ, ಶಾಲೆಯಲ್ಲಿ ನೀಡುವ ಬೆಳಗಿನ ಹಾಲು, ರಾಗಿ ಮಾಲ್ಟ್, ಚಿಕ್ಕಿ, ಮೊಟ್ಟೆ, ಬಾಳೆಹಣ್ಣು, ಮಧ್ಯಾಹ್ನದ ಬಿಸಿಯೂಟ ಸೇವಿಸುವುದರಿಂದ ಬೆಳೆಯುವ ಮಕ್ಕಳ ದೇಹದಲ್ಲಿ ಮಾನಸಿಕ ಮತ್ತು ದೇಹದ ಆರೋಗ್ಯದಲ್ಲಿ ಸದೃಢತೆ ಉಂಟಾಗುವ ಕುರಿತಂತೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎನ್. ಹುಗ್ಗಿ, ಡಯಟ್ ಪ್ರಾಚಾರ್ಯ ಗಿರೀಶ ಪದಕಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಝಡ್.ಎಂ. ಖಾಜಿ, ಜಿಲ್ಲಾ ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಗ್ರಾಪಂ ಅಧ್ಯಕ್ಷ ಬಸನಗೌಡ ಪಾಟೀಲ, ಉಪಾಧ್ಯಕ್ಷೆ ಶಿವಲೀಲಾ ತಿರಕಣ್ಣನವರ, ಶಿಕ್ಷಣ ಸಂಯೋಜಕ ಎಸ್.ಆರ್. ಹಿರೇಮಠ, ಸಿಆರ್‌ಪಿ ಶ್ರೀಕಾಂತ್ ದೊಡ್ಡಕುರುಬರ, ಎಸ್‌ಡಿಎಂಸಿ ಅಧ್ಯಕ್ಷ ನಾಗಪ್ಪ ಊದಗಟ್ಟಿ, ಮುಖ್ಯೋಪಾಧ್ಯಾಯಿನಿ ತನುಜಾ ಇತರರು ಇದ್ದರು.