ರೋಣ: 1ರಿಂದ 10ನೇ ತರಗತಿವರೆಗಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಇನ್ನು ಮುಂದೆ ಕೆನೆಭರಿತ ಹಾಲಿನೊಂದಿಗೆ ಪೌಷ್ಟಿಕಾಂಶಯುಳ್ಳ ರಾಗಿ ಮಾಲ್ಟ್ (ಗಂಜಿ) ಮಿಶ್ರಣ ಮಾಡಿ ವಿತರಿಸುವ ಯೋಜನೆ ಜಾರಿಗೆ ತರಲಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.ಅವರು ಗುರುವಾರ ಪಟ್ಟಣದ ಎಸ್.ಆರ್. ಪಾಟೀಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಪಂ, ತಾಪಂ ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ರೋಣ, ಶಾಲಾ ಶಿಕ್ಷಣ ಇಲಾಖೆ, ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ ಮುದ್ದೇನಹಳ್ಳಿ ಮತ್ತು ಕೆ. ಎಂ.ಎಫ್ ಸಂಸ್ಥೆ ಇವರ ಸಹಭಾಗಿತ್ವದಲ್ಲಿ ರೋಣ ತಾಲೂಕು ಮಟ್ಟದ ಕಾರ್ಯಕ್ರಮವನ್ನು ಮಕ್ಕಳಿಗೆ ರಾಗಿ ಮಾಲ್ಟ ಕುಡಿಸುವದರೊಂದಿಗೆ ಉದ್ಘಾಟಿಸಿ ಮಾತನಾಡಿದರು. ಮಧ್ಯಾಹ್ನ ಉಪಹಾರ ಯೋಜನೆಯಡಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ 1ರಿಂದ 10ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕಾಂಶ ಆಹಾರವಾಗಿ ಬಿಸಿ ಹಾಲಿನೊಂದಿಗೆ ಮಿಶ್ರಣಗೊಳಿಸಿ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ 3 ದಿನ ಬೆಳಗ್ಗೆ ಕ್ಷೀರಭಾಗ್ಯ ಯೋಜನೆಯಡಿ ವಿತರಿಸಲಾಗುವುದು ಕೆನೆಭರಿತ ಬಿಸಿ ಹಾಲಿನೊಂದಿಗೆ ಮಿಶ್ರಣ ಮಾಡಿ ಮಕ್ಕಳಿಗೆ ವಿತರಿಸಲಾಗುವದು. ಈ ಕಾರ್ಯಕ್ರಮವು ಮಾ. 1ರಿಂದ ಪ್ರತಿಯೊಂದು ಸರ್ಕಾರಿ ಮತ್ತು ಅನುದಾನಿ ಶಾಲೆಗಳು ಜಾರಿಗೆ ಬರಲಿದೆ ಎಂದರು.ಶಾಲಾ ದುರಸ್ತಿಗೆ₹ 90 ಲಕ್ಷ ಮಂಜೂರು ಪಟ್ಟಣದಲ್ಲಿನ ಎಸ್.ಆರ್.ಪಾಟೀಲ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡವು 45 ವರ್ಷಗಳ ಹಳೆಯದಾಗಿದ್ದು, ಈ ಕಟ್ಟಡವನ್ನು ಈ ಪಟ್ಟಣದ ಜನತೆ ದೇಣಿಗೆ ಮೂಲಕ ಕಟ್ಟಿಸಲಾಗಿದ್ದು, ಇತ್ತೀಚಿಗೆ ಶಾಲೆ ಕೊಠಡಿಗಳು ದುರಸ್ತಿ ಹಂತಕ್ಕೆ ತಲುಪಿದ್ದು, ಮರು ನವೀಕರಣಕ್ಕಾಗಿ, ಇದರಲ್ಲಿ 25ಕ್ಕೂ ಹೆಚ್ಚು ಕೊಠಡಿಗಳಲ್ಲಿ 11 ಕೊಠಡಿಗಳಿಗೆ ಹೊಸದಾಗಿ ಸ್ಲ್ಯಾಬ್ ಹಾಕಲು, ಕಿಟಗಿ, ಬಾಗಿಲು ದುರಸ್ತಿ, ಬಣ್ಣ ಸೇರಿದಂತೆ ನವೀಕರಣಕ್ಕಾಗಿ ₹90 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ.ಈ ಕಾಮಗಾರಿಯೂ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿಯನ್ನು ಲ್ಯಾಂಡ್ ಆರ್ಮಿ ಸಂಸ್ಥೆ ನಿರ್ವಹಿಸಲಿದೆ ಎಂದರು.
ಸರ್ಕಾರಿ ಶಾಲಾ ಮಕ್ಕಳಿಗೂ ಉಚಿತ ಬಸ್ ಸೇವೆ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಸಂಖ್ಯೆ ಹೆಚ್ವಿಸುವಲ್ಲಿ, ವಿದ್ಯಾರ್ಥಿಗಳಿಗೆ ಮನೆಯಿಂದ ಶಾಲೆಗೆ ಸುರಕ್ಷಿತವಾಗಿ ಹೋಗಿ, ಮನೆಗೆ ಬರುವಲ್ಲಿ, ಖಾಸಗಿ ಶಾಲೆಗಳು ಯಾವ ರೀತಿಯಾಗಿ ಬಸ್ ವ್ಯವಸ್ಥೆ ಮಾಡಿದ್ದಾರೋ ಅದೇ ರೀತಿಯಾಗಿ ರೋಣ ಎಸ್.ಆರ್. ಪಾಟೀಲ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿನ ಮಕ್ಕಳನ್ನು ಮನೆಯಿಂದ ಕರೆತಂದು, ವಾಪಸ್ ಮನೆವರೆಗೆ ತಲುಪಿಸುವಲ್ಲಿ ಎಸ್.ಆರ್. ಪಾಟೀಲ ಪ್ರತಿಷ್ಠಾನದಿಂದ ಸಂಪೂರ್ಣ ಉಚಿತವಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಈ ಕುರಿತು ಈಗಾಗಲೇ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಸೇವೆ ವ್ಯವಸ್ಥೆ ಮಾಡಲಾಗುವದು ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.ಪ್ರಾಸ್ತಾವಿಕವಾಗಿ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜ ಅಂಗಡಿ ಮಾತನಾಡಿ, ರೋಣ ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 36 ಸಾವಿರ ಮಕ್ಕಳ ಶ್ರೀಸತ್ಯಸಾಯಿ ಅನ್ನಪೂರ್ಣ ಟ್ರಸ್ಟ ಸಹಭಾಗಿತ್ವದಲ್ಲಿ ಮಾ.1ರಿಂದ ರಾಗಿ ಮಾಲ್ಟ ವಿತರಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ತಾಪಂ ಇಒ ರವಿ ಎ.ಎನ್, ಪುರಸಭೆ ಸದಸ್ಯ ಗದಿಗೆಪ್ಪ ಕಿರೇಸೂರ, ದಾವಲಸಾಬ ಬಾಡಿನ, ಯೂಶೂಫ ಇಟಗಿ, ಪುರಸಭೆ ಮಾಜಿ ಅಧ್ಯಕ್ಷ ಶಫೀಕ ಮೂಗನೂರ, ಮೌನೇಶ ಹಾದಿಮನಿ, ಎಂ.ಎ. ಫಣಿಬಂಧ, ಬಿ.ಎನ್. ಖ್ಯಾತನಗೌಡ್ರ ಉಪಸ್ಥಿತರಿದ್ದರು. ಬಿಇಒ ರುದ್ರಪ್ಪ ಹುರಳಿ ಸ್ವಾಗತಿಸಿದರು. ಶಿಕ್ಷಕ ವಿಶ್ವನಾಥ ಕಮ್ಮಾರ ನಿರೂಪಿಸಿದರು. ಆರ್.ಜಿ.ಕೆಂಚನಗೌಡ್ರ ವಂದಿಸಿದರು.