ಕನ್ನಡಪ್ರಭ ವಾರ್ತೆ ಕುಶಾಲನಗರ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಅಡಿಪ್ ಮತ್ತು ರಾಷ್ಟ್ರೀಯ ವಯೋಸಿರಿ ಯೋಜನೆಯಡಿ ಅಲಿಂಕೊ ಸಂಸ್ಥೆಯ ವತಿಯಿಂದ ವಿಕಲಚೇತನರಿಗೆ ಸಾಧನ ಸರಕಾರ ನೀಡುವ ಕಾರ್ಯಕ್ರಮ ಕುಶಾಲನಗರ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಿತು.ರೋಟರಿ ಕುಶಾಲನಗರ ಅಲಿಂಕೊ ಸಂಸ್ಥೆ ಮತ್ತು ಅಂಗವಿಕಲ ಕಲ್ಯಾಣ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಡಾ. ಮಂತರ್ ಗೌಡ ಉದ್ಘಾಟಿಸಿ ವಿಕಲಚೇತನರಿಗೆ ಅಗತ್ಯ ಸಲಕರಣೆಗಳನ್ನು ವಿತರಣೆ ಮಾಡಿದರು. ಕುಶಾಲನಗರ ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಂಗವಿಕಲತೆ ಹೊಂದಿದ ಸುಮಾರು 86 ಮಂದಿಗೆ ಗಾಲಿ ಕುರ್ಚಿ, ವಾಕ್ ಸ್ಟಿಕ್ ಸೇರಿದಂತೆ ಅಗತ್ಯ ಸಲಕರಣೆಗಳ ವಿತರಣೆ ನಡೆಯಿತು. ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ವಿಕಲಚೇತನರಿಗೆ ಕೇಂದ್ರ ಸರ್ಕಾರದ 9.75 ಲಕ್ಷ ಮತ್ತು ರಾಜ್ಯ ಸರ್ಕಾರದ 1.5 ಲಕ್ಷ ರು. ವೆಚ್ಚದಲ್ಲಿ 86 ಮಂದಿಗೆ ಸಲಕರಣೆಗಳನ್ನು ವಿತರಿಸಲಾಯಿತು. ವಿಕಲಚೇತನ ವಿದ್ಯಾರ್ಥಿಗೆ ಲ್ಯಾಪ್ಟಾಪ್ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ವಿಕಲಚೇತನರಿಗೆ ಉತ್ತಮ ಜೀವನ ನಡೆಸುವ ಹಿನ್ನೆಲೆಯಲ್ಲಿ ನಿರಂತರವಾಗಿ ಸರ್ಕಾರದ ಮೂಲಕ ಎಲ್ಲಾ ರೀತಿಯ ಸಹಕಾರ ಒದಗಿಸುವ ಯೋಜನೆ ಇದ್ದು ಅಗತ್ಯ ಸವಲತ್ತುಗಳ ಹಸ್ತಾಂತರ ಕಾರ್ಯ ನಡೆಯುತ್ತಿದೆ ಎಂದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ, ಪ್ರಮುಖರಾದ ಮಂಜುನಾಥ ಗುಂಡುರಾವ್, ಜೋಸೆಫ್ ವಿಕ್ಟರ್ ಸೋನ್ಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ, ಕುಶಾಲನಗರ ಪುರಸಭೆ ಅಧ್ಯಕ್ಷರಾದ ಜಯಲಕ್ಷ್ಮಿ, ಆರೋಗ್ಯ ನಿರೀಕ್ಷಕರಾದ ವಿಶ್ವಜ್ಞ, ವಿವೇಕಾನಂದ ಮೂಮೆಂಟ್ ಸಲಹಾ ಸದಸ್ಯರಾದ ಅಜಯ್ ಸೂದ್, ರೋಟರಿ ಕಾರ್ಯದರ್ಶಿ ಮಂಜುನಾಥ್, ಮಹೇಶ್ ನಾಲ್ವಡೆ, ಸುನಿತಾ ಮಹೇಶ್ ಮತ್ತಿತರರು ಇದ್ದರು.