ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಆಹಾರ ಇಲಾಖೆಯ ಸರ್ವರ್ ಸಮಸ್ಯೆ ಶನಿವಾರವೂ ಮುಂದುವರೆದಿದ್ದು ಕಾರ್ಡುದಾರರು ಸಕಾಲಕ್ಕೆ ಪಡಿತರ ಲಭ್ಯವಾಗದೆ ಹೈರಾಣಾಗಿದ್ದಾರೆ.ಗಂಟೆಗೆ ೫ರಿಂದ ೧೦ಕಾರ್ಡುಗಳಿಗೆ ಮಾತ್ರ ಬಯೋಮೆಟ್ರಿಕ್ ಪಡೆದು ಅಕ್ಕಿ ವಿತರಿಸುವಂತಾಗಿದೆ. ಹೊಸ ಸರ್ವರ್ ಆಗಿರುವುದರಿಂದ ಹೊಂದಾಣಿಕೆಯಾಗಲು ಸಮಯ ತೆಗೆದುಕೊಳ್ಳುತ್ತದೆ, ಈ ವಿಷಯವನ್ನು ಆಹಾರ ಇಲಾಖೆಯ ಆಯುಕ್ತರ ಗಮನಕ್ಕೂ ಬಂದಿದೆ ಎಂದು ಇಲಾಖೆಯ ಆಯುಕ್ತರ ಕಚೇರಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದೆ.
ಹೊಸ ತಂತ್ರಾಂಶ ವಿಳಂಬಹೊಸ ತಂತ್ರಾಂಶದಲ್ಲಿ ಸ್ಟಾಕ್ ತೋರಿಸುತ್ತಿಲ್ಲ, ಎಷ್ಟು ಕಾರ್ಡುಗಳಿಗೆ ಅಕ್ಕಿ ವಿತರಿಸಲಾಗಿದೆ ಎಂಬುದನ್ನು ತೋರಿಸುತ್ತಿಲ್ಲ. ಕೇವಲ ಕೇಂದ್ರ ಪಡಿತರ ಕಾರ್ಡುಗಳಿಗೆ ಮಾತ್ರ ಅಕ್ಕಿ ವಿತರಿಸಲು ಸಾಧ್ಯವಾಗುತ್ತಿದೆ, ರಾಜ್ಯ ಕಾರ್ಡುಗಳಿಗೆ ಅಕ್ಕಿ ವಿತರಿಸಲು ಹೊಸ ತಂತ್ರಾಂಶದಲ್ಲಿ ಆಗುತ್ತಿಲ್ಲ, ಬೆರಳಚ್ಚು ನೀಡಲಾಗದವರಿಗೆ ನೀಡಿರುವ ರಿಯಾಯಿತಿ ಕಾರ್ಡುದಾರರ ಸಂಖ್ಯೆ ನೋಂದಾಯಿಸಲೂ ಆಗುತ್ತಿಲ್ಲ. ಇದು ಹೀಗೆ ಮುಂದುವರೆದರೆ ಗ್ರಾಹಕರಿಗೆ ಉತ್ತರಿಸಲಾಗದೆ ಅಂಗಡಿ ಬಾಗಿಲನ್ನು ಮುಚ್ಚಿಕೊಂಡು ಹೋಗಬೇಕಾಗುತ್ತದೆ ಎಂದು ಜಿಲ್ಲಾ ಪಡಿತರ ವಿತರಕರ ಸಂಘದ ಅಧ್ಯಕ್ಷ ಹುನ್ಕುಂದ ಶ್ರೀನಿವಾಸ್ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.
20ರ ಬಳಿಕ ಅಕ್ಕಿ ವಿತರಣೆಬೆಂಗಳೂರಿನ ಆಹಾರ ಇಲಾಖೆಯ ಆಯುಕ್ತರ ಕಚೇರಿಯ ಮಾಹಿತಿಯಂತೆ ಅ.೨೦ರ ನಂತರವೇ ಅಂಗಡಿ ಬಾಗಿಲನ್ನು ತೆರೆದು ಅಕ್ಕಿ ವಿತರಿಸಲು ಅಂಗಡಿ ಮಾಲೀಕರು ನಿರ್ಧರಿಸಿದ್ದಾರೆ. ಹೊಸ ಕೆಎಸ್‌ಡಿಸಿ ಸರ್ವರ್ ಮೂಲಕ ಪಡಿತರ ವಿತರಣೆ ಮಾಡುವ ಕಾರ್ಯ ಪ್ರಾರಂಭವಾಗಿದ್ದು, ಈ ಸಂಬಂದ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದೆ. ಪಡಿತರ ಚೀಟಿದಾರರಿಗೆ ಅನುಕೂಲವಾಗಲೆಂದು ಅಕ್ಟೋಬರ್ ತಿಂಗಳಿಗೆ ಮಾತ್ರ ಅನ್ವಯಿಸುವಂತೆ ನಿತ್ಯ ಬೆಳಗ್ಗೆ ೭ರಿಂದ ರಾತ್ರಿ ೧೦ರತನಕ ಸರ್ವರ್ ಲಭ್ಯವಾಗಲಿದೆ ಎಂದೂ ಮಾಹಿತಿಯನ್ನು ಎಲ್ಲಾ ಜಿಲ್ಲಾ ಉಪ ನಿರ್ದೇಶಕರಿಗೆ ಆಯುಕ್ತರು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.