ದಾಬಸ್‍ಪೇಟೆ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಗುಣಮಟ್ಟ ಮತ್ತು ಸಹಾಯಧನದಡಿ ಬಿತ್ತನೆ ಬೀಜ ಸಂಗ್ರಹಿಸಿದ್ದು, ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ರೈತರು ಅಗತ್ಯ ಬಿತ್ತನೆ ಬೀಜಗಳನ್ನು ಖರೀದಿಸುತ್ತಿದ್ದಾರೆ.
ಸೋಂಪುರ, ತ್ಯಾಮಗೊಂಡ್ಲು, ಸೋಲೂರು, ತ್ಯಾಮಗೊಂಡ್ಲು, ಕಸಬಾ ಹೋಬಳಿಯ ರೈತರು ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜಗಳನ್ನು ಸಹಾಯ ಧನದಲ್ಲಿ ವಿತರಿಸಲಾಗುತ್ತಿದೆ. ರಾಗಿ ಬಿತ್ತನೆ ಬೀಜಗಳಿಗೆ ಸಾಮಾನ್ಯ ವರ್ಗದವರಿಗೆ 5 ಕೆಜಿ ರಾಗಿ ಬ್ಯಾಗ್‍ಗೆ 90 ರು. ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 135 ರು. ತೊಗರಿ ಬಿತ್ತನೆ ಬೀಜದ 5 ಕೆಜಿ ಬ್ಯಾಗ್‍ಗೆ ಸಾಮಾನ್ಯ ವರ್ಗದವರಿಗೆ 125 ರು. ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 188 ರು., ಅಲಸಂದೆ ಬಿತ್ತನೆ ಬೀಜಗಳಿಗೆ ಸಾಮಾನ್ಯ ವರ್ಗದವರಿಗೆ 5 ಕೆಜಿ ಬ್ಯಾಗ್‍ಗೆ 125 ರು., ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 188 ರು. ಮುಸುಕಿನ ಜೋಳ ಬಿತ್ತನೆ ಬೀಜಗಳಿಗೆ ಸಾಮಾನ್ಯ ವರ್ಗದವರಿಗೆ 4 ಕೆಜಿ ಬ್ಯಾಗ್‍ಗೆ 100 ರು., ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 140 ರು., ಸಹಾಯಧನದ ಮೂಲಕ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ.
ಸೈನಿಕ ಹುಳುವಿನ ಕಾಟ:ಇತ್ತೀಚಿಗೆ ಮುಸುಕಿನ ಜೋಳದ ಬೆಳೆಗೆ ಸಸಿಯಲ್ಲಿಯೇ ಕೀಟಬಾಧೆ ಹೆಚ್ಚಾಗುತ್ತಿದೆ. ಆದ್ದರಿಂದ ಈ ಬಾರಿ ಕೃಷಿ ವಿಜ್ಞಾನಿಗಳ ಸಹಾಯ ಪಡೆದು ರೈತರಿಗೆ ಕೀಟಬಾಧೆಯನ್ನು ತಪ್ಪಿಸುವ ಮುಂಜಾಗ್ರತೆ ಕುರಿತು ಅರಿವು ಮೂಡಿಸಲಾಗುವುದು. ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ.50ರಷ್ಟು ಸಹಾಯಧನ ನೀಡಿ ಕೀಟನಾಶಕಗಳ ಪೂರೈಕೆಸಲಾಗುತ್ತಿದೆ. ಕೇಂದ್ರದಲ್ಲಿ ಮೈಕ್ರೋನ್ಯೂಟ್ರಿಯಂಟ್ ಲಿಕ್ವಿಡ್, ಎಮಾಮೆಕ್ಸಿನ್ ಬೆಂಜೋಯೇಟ್, ಸೈಕಲ್ ವೀಡರ್, ಬಯೋ ಎನ್ ಪಿಕೆ, ಎರಡು ರೆಕ್ಕೆ ನೇಗಿಲು, ನಿಮಾರಿನಾ, ಜಿಪ್ಸಂ, ಬೋರನ್, ಟ್ರೇಕೊಡಮ್ಮ, ಎಂ ಎನ್ ಪೌಡರ್, ಕಾರ್ ಬೆಂಡಾಜಿಮ್ ಪ್ಲಸ್ ಮ್ಯಾನ್ಕೊಜೆಬ್, ಕೀಟನಾಶಕದ ಪರಿಕರಗಳಿದ್ದು ಶೇ. 50ರಷ್ಟು ಸಹಾಯಧನ ನೀಡಲಾಗುತ್ತಿದೆ.
ಸೋಂಪುರ ಹೋಬಳಿಯ ಸುತ್ತಮುತ್ತ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ರೈತರಿಗೆ ಅಗತ್ಯ ಬಿತ್ತನೆ ಬೀಜಗಳನ್ನು ಕೃಷಿ ಕೇಂದ್ರದಲ್ಲಿ ಸಂಗ್ರಹಿಸಿಟ್ಟಿದ್ದು, ರೈತರು ಆಧಾರ್ ಕಾರ್ಡ್ ಮತ್ತು ಪಹಣಿ ನೀಡಿ ಬಿತ್ತನೆ ಬೀಜಗಳನ್ನು ಪಡೆಯಬಹುದಾಗಿದೆ. ಕೃಷಿ ಕೇಂದ್ರದಲ್ಲೇ ಬೆಳೆ ವಿಮೆ ಸೌಲಭ್ಯವಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬಹುದು.
ಪೋಟೋ 1 :