ಹುಬ್ಬಳ್ಳಿಯಲ್ಲಿ ತಯಾರಾಗುವ ಮೂರ್ತಿಗಳ ಜತೆಗೆ ಸೊಲ್ಲಾಪುರ, ಮುಂಬೈ ಸೇರಿದಂತೆ ವಿವಿಧೆಡೆಯಿಂದ ತರಲಾಗುವ ವಿಭಿನ್ನ ವಿನ್ಯಾಸದ ಮೂರ್ತಿಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನೀಡಲಾಗುತ್ತಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಹುಬ್ಬಳ್ಳಿಯಲ್ಲಿ ಗಣೇಶ ಚತುರ್ಥಿಯ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದ್ದು ಮಾರುಕಟ್ಟೆ ಗರಿಗೆದರಿದೆ. ಆದರೆ, ಈ ಬಾರಿ ಗಣಪತಿ ಮೂರ್ತಿಗಳ ಮಾರಾಟದ ಅಬ್ಬರ ರಸ್ತೆ ಬದಿ ಮಳಿಗೆ, ಮಾರುಕಟ್ಟೆ ಹಾಗೂ ಮಂಟಪಗಳಿಗೆ ಮಾತ್ರ ಸೀಮಿತವಾಗಿಲ್ಲ. ಮೊಬೈಲ್ ಪರದೆಯಲ್ಲೇ ವಿವಿಧ ರೂಪಗಳ ಗಣಪತಿ ದರ್ಶನವಾಗುತ್ತಿದ್ದು, ಇಷ್ಟವಾದ ಮೂರ್ತಿಯನ್ನು ಅಲ್ಲಿಂದಲೇ ಬುಕ್ ಮಾಡುವ ಹೊಸ ಖರೀದಿ ಪದ್ಧತಿ ಜನಪ್ರಿಯವಾಗುತ್ತಿದೆ.

ಇನ್‌ಸ್ಟಾಗ್ರಾಂ ರೀಲ್ಸ್, ವಾಟ್ಸ್‌ಆ್ಯಪ್ ಸ್ಟೇಟಸ್ ಹಾಗೂ ಫೇಸ್‌ಬುಕ್ ಪೋಸ್ಟ್‌ಗಳು ಗಣೇಶ ಮೂರ್ತಿಗಳ ಮಾರಾಟಕ್ಕೆ ಪ್ರಮುಖ ಪ್ರಚಾರ ವೇದಿಕೆಗಳಾಗಿವೆ. ಮೂರ್ತಿಕಾರರು, ಡೆಕೋರೇಷನ್ ವಸ್ತುಗಳ ಮಾರಾಟಗಾರರು ಹಾಗೂ ಲೈಟಿಂಗ್ ವ್ಯಾಪಾರಿಗಳು ಮೂರ್ತಿಯ ವಿನ್ಯಾಸ, ಗಾತ್ರ, ಬಣ್ಣ, ವಿಶೇಷತೆ ಮತ್ತು ಬೆಲೆಯನ್ನು ಕೆಲವೇ ಸೆಕೆಂಡ್‌ಗಳ ವಿಡಿಯೋದಲ್ಲಿ ಪರಿಚಯಿಸಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಗ್ರಾಹಕರು ಇಷ್ಟವಾದ ಮೂರ್ತಿಯ ಚಿತ್ರ ಅಥವಾ ವಿಡಿಯೋವನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿ, ಬೆಲೆ ಹಾಗೂ ಇತರ ವಿವರ ಪಡೆದು ಆನ್‌ಲೈನ್‌ ಮೂಲಕವೇ ಬುಕ್ಕಿಂಗ್‌ ಮಾಡಿ ತರಿಸಿಕೊಳ್ಳುತ್ತಿದ್ದಾರೆ.

ಮಂಟಪಗಳು ಆನ್‌ಲೈನ್:

ಕೃತಕ ಹೂವು, ಹೂವಿನ ಮಾಲೆ, ಬ್ಯಾಕ್‌ಡ್ರಾಪ್, ಎಲ್‌ಇಡಿ ಲೈಟ್ಸ್, ಗಣಪತಿ ಆಸನ, ಅಲಂಕಾರಿಕ ಛತ್ರಿ, ತೋರಣ, ಬಲೂನ್ ಡೆಕೋರೇಷನ್ ಸೇರಿದಂತೆ ವಿವಿಧ ಥೀಮ್‌ಗಳ ಚಿತ್ರ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗುತ್ತಿದೆ. "ನೀವು ಬುಕ್ ಮಾಡಿ, ನಾವು ಮನೆಗೆ ಬಂದು ಅಲಂಕಾರ ಮಾಡುತ್ತೇವೆ " ಎಂಬ ಸೇವೆಯೂ ಗ್ರಾಹಕರ ಗಮನ ಸೆಳೆಯುತ್ತಿದೆ.

ಡಿಜಿಟಲ್ ಪ್ರಚಾರ:

ಹುಬ್ಬಳ್ಳಿಯಲ್ಲಿ ತಯಾರಾಗುವ ಮೂರ್ತಿಗಳ ಜತೆಗೆ ಸೊಲ್ಲಾಪುರ, ಮುಂಬೈ ಸೇರಿದಂತೆ ವಿವಿಧೆಡೆಯಿಂದ ತರಲಾಗುವ ವಿಭಿನ್ನ ವಿನ್ಯಾಸದ ಮೂರ್ತಿಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನೀಡಲಾಗುತ್ತಿದೆ. ಹೊಸ ವಿನ್ಯಾಸದ ಮೂರ್ತಿಗಳ ವಿಡಿಯೋಗಳನ್ನು ಮುಂಚಿತವಾಗಿಯೇ ಹರಿಬಿಟ್ಟು ಬೇಡಿಕೆ ಸೃಷ್ಟಿಸಲಾಗುತ್ತಿದೆ.

ಹೊರ ಜಿಲ್ಲೆಗಳಿಗೂ ಪಾರ್ಸೆಲ್!

ಡಿಜಿಟಲ್ ಪ್ರಚಾರದಿಂದ ಹುಬ್ಬಳ್ಳಿಯ ಗಣೇಶಮೂರ್ತಿ ವ್ಯಾಪಾರವೂ ನಗರದ ಗಡಿ ದಾಟಿದೆ. ಕಲಬುರಗಿ, ಮೈಸೂರು, ಬೆಂಗಳೂರು, ಹಾವೇರಿ, ದಾವಣಗೆರೆ, ಗದಗ, ಬಳ್ಳಾರಿ, ಕೊಪ್ಪಳ ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಿಂದ ಮೊಬೈಲ್‌ ಮೂಲಕ ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಹೀಗಾಗಿ ಹುಬ್ಬಳ್ಳಿಯ ಗಣಪ ಬೇರೆ ಜಿಲ್ಲೆಗಳ ಮನೆ, ಸಾರ್ವಜನಿಕ ಸ್ಥಳಗಳಲ್ಲಿ ಕಂಗೊಳಿಸಲಿದ್ದಾನೆ.

ಬದಲಾಗುತ್ತಿದೆ ಖರೀದಿ ಪದ್ಧತಿ:

ಪರಿಚಿತ ಮೂರ್ತಿಕಾರರ ಬಳಿಗೆ ತೆರಳಿ ಗಣಪತಿ ಆಯ್ಕೆ ಮಾಡುತ್ತಿದ್ದ ಸಾಂಪ್ರದಾಯಿಕ ಪದ್ಧತಿಯ ಜತೆಗೆ ಇದೀಗ ರೀಲ್ಸ್, ಫೇಸ್‌ಬುಕ್ ಪೋಸ್ಟ್, ವಾಟ್ಸ್‌ಆ್ಯಪ್ ಸ್ಟೇಟಸ್ ಮತ್ತು ಮೊಬೈಲ್ ಬುಕ್ಕಿಂಗ್ ಸೇರಿಕೊಂಡಿವೆ. ಮಾರುಕಟ್ಟೆಗೆ ಕಾಲಿಡುವ ಮುನ್ನವೇ ಗ್ರಾಹಕರು ಮೊಬೈಲ್‌ನಲ್ಲಿ ಹಲವು ಬಗೆಯ ಗಣಪತಿಗಳನ್ನು ವೀಕ್ಷಿಸಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಗಣೇಶೋತ್ಸವದ ಸಡಗರ ಮಾರುಕಟ್ಟೆಯ ಮಂಟಪದಿಂದ ಮೊಬೈಲ್ ಪರದೆಗೂ ವಿಸ್ತರಿಸಿದ್ದು, ಗಣಪತಿ ಖರೀದಿಗೂ ಡಿಜಿಟಲ್ ಟಚ್ ಸಿಕ್ಕಂತಾಗಿದೆ.

ಸಾವಿರಾರು ಗಣಪತಿಗಳ ಮಾರಾಟ

ಇಲ್ಲಿನ ನೇಕಾರ ನಗರ, ಬಮ್ಮಾಪುರ ಓಣಿ, ಕುಂಬಾರ ಓಣಿ, ದಾಜಿಬಾನಪೇಟೆ, ದುರ್ಗದ ಬೈಲ್ ಸೇರಿದಂತೆ ನಗರದ ವಿವಿಧೆಡೆ ಗಣೇಶಮೂರ್ತಿ ಹಾಗೂ ಅಲಂಕಾರಿಕ ವಸ್ತುಗಳ ವ್ಯಾಪಾರಿಗಳು ಸಾಮಾಜಿಕ ಜಾಲತಾಣಗಳನ್ನು ಪ್ರಮುಖ ಪ್ರಚಾರ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ನಮ್ಮ ಹುಬ್ಬಳ್ಳಿ, ಅಮೋಘ್ ಆರ್ಟ್ಸ್, ಜ್ಯೋತಿ ಡೆಕೊರ್ಸ್, ಹುಬ್ಬಳ್ಳಿ ಫ್ಲಾವರ್, ಹುಬ್ಬಳ್ಳಿ ಕ್ರಾಫ್ಟಿಂಗ್ಸ್, ಶಿವಾ ಆರ್ಟ್ಸ್, ನವೀಲ್ ಲೈಟ್ಸ್, ವಾಕ್ ವಿಥ್ ಹುಬ್ಬಳ್ಳಿ ಸೇರಿದಂತೆ ಹಲವು ಸಾಮಾಜಿಕ ಜಾಲತಾಣ ಪುಟಗಳಲ್ಲಿ ಗಣೇಶೋತ್ಸವದ ವಸ್ತುಗಳ ವಿಡಿಯೊಗಳು ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣದ ಮೂಲಕ ಗ್ರಾಹಕರು ನೇರವಾಗಿ ಸಂಪರ್ಕಿಸುತ್ತಿದ್ದಾರೆ. ಇಷ್ಟವಾದ ಮೂರ್ತಿ ಹಾಗೂ ಹೂವಿನ ಅಲಂಕಾರವನ್ನು ಮೊಬೈಲ್‌ನಲ್ಲೇ ಕಾಯ್ದಿರಿಸುತ್ತಿದ್ದಾರೆ. ವಿವಿಧ ಜಿಲ್ಲೆಗಳಿಂದ 150ಕ್ಕೂ ಹೆಚ್ಚು ಮೂರ್ತಿಗಳಿಗೆ ಮುಂಗಡ ಆರ್ಡರ್‌ಗಳು ಬಂದಿವೆ.

ಅಮೋಘ್‌ ಬುಲಬುಲೆ, ಅಮೋಘ್ ಆರ್ಟ್ಸ್‌ನ ಮಾಲೀಕ