ಪಶ್ಚಿಮ ಘಟ್ಟದಲ್ಲಿನ ಎಲ್ಲ ಕೃಷಿ ಭೂಮಿಗಳಿಗೆ ಹಕ್ಕು ಪತ್ರಗಳ ವಿತರಣೆ: ಜಂಟಿ ಸರ್ವೆ ನಡೆಸಲು ಮನವಿ

KannadaprabhaNewsNetwork |  
Published : Apr 09, 2025, 12:32 AM IST
ಫೋಟೋ: ೭ಪಿಟಿಆರ್-ಶಿರಾಡಿಮಲೆನಾಡು ಜನ ಹಿತರಕ್ಷಣಾ ವೇದಿಕೆಯ ವತಿಯಿಂದ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಮೀಸಲು ಅರಣ್ಯ ಪ್ರದೇಶಗಳ ಬಳಿಯಲ್ಲಿರುವ ಎಲ್ಲ ಕೃಷಿ ಭೂಮಿಯನ್ನು ಸರ್ಕಾರವು ಆದೇಶಿಸಿರುವಂತೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ, ರೈತರ ಸ್ವಾಧೀನದಲ್ಲಿರುವ ಭೂಮಿಗಳಿಗೆ ಹಕ್ಕು ಪತ್ರ ನೀಡಿ ಫ್ಲೋಟಿಂಗ್ ನಡೆಸುವ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಮಲೆನಾಡು ಹಿತರಕ್ಷಣಾ ವೇದಿಕೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ದ.ಕ. ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಮೀಸಲು ಅರಣ್ಯ ಪ್ರದೇಶಗಳ ಬಳಿಯಲ್ಲಿರುವ ಎಲ್ಲ ಕೃಷಿ ಭೂಮಿಯನ್ನು ಸರ್ಕಾರವು ಆದೇಶಿಸಿರುವಂತೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ, ರೈತರ ಸ್ವಾಧೀನದಲ್ಲಿರುವ ಭೂಮಿಗಳಿಗೆ ಹಕ್ಕು ಪತ್ರ ನೀಡಿ ಫ್ಲೋಟಿಂಗ್ ನಡೆಸುವ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಸೋಮವಾರ ಮಲೆನಾಡು ಹಿತರಕ್ಷಣಾ ವೇದಿಕೆ ವತಿಯಿಂದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.ದ.ಕ. ಜಿಲ್ಲೆಯ ಪಶ್ಚಿಮ ಘಟ್ಟಕ್ಕೆ ತಾಗಿಕೊಂಡಿರುವ ಸುಳ್ಯ, ಬೆಳ್ತಂಗಡಿ, ಕಡಬ ಮತ್ತು ಪುತ್ತೂರು ತಾಲೂಕುಗಳ ಗ್ರಾಮಗಳಲ್ಲಿ ಸ್ವಾಧೀನದಲ್ಲಿರುವ ಭೂಮಿಗಳಿಗೆ ಈ ತನಕ ಹಕ್ಕು ಪತ್ರ ನೀಡಲಾಗಿಲ್ಲ. ನೂರಾರು ವರ್ಷಗಳಿಂದ ಇಲ್ಲಿ ಕೃಷಿ ಮಾಡಿಕೊಂಡು ಬಂದಿರುವ ಭೂಮಿಗಳಿಗೆ ಹಕ್ಕು ಪತ್ರ ಇಲ್ಲದೆ ಹಾಗೂ ಫ್ಲೋಟಿಂಗ್ ಆಗದಿರುವ ಕಾರಣದಿಂದ ಇಲ್ಲಿನ ಜಾಗಕ್ಕೆ ಕೃಷಿ ಅಭಿವೃದ್ಧಿ ಸಾಲ ದೊರಕುತ್ತಿಲ್ಲ. ಇದರಿಂದಾಗಿ ಇಲ್ಲಿನ ರೈತರಿಗೆ ಸಮಸ್ಯೆಯಾಗುತ್ತಿದೆ.

ಈಗಾಗಲೇ ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ಕಂದಾಯ ಇಲಾಖೆಯ ಅಧಿಕಾರಿಗಳು ಇಲ್ಲದೆ ಸರ್ವೆ ನಡೆಸಿರುವ ಕಾರಣದಿಂದಾಗಿ ಈ ಭಾಗದ ರೈತರು ಆತಂಕದಲ್ಲಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಸ್ಥಳೀಯ ಪಂಚಾಯಿತಿ ಸದಸ್ಯರು, ಗ್ರಾಮದ ರೈತರನ್ನು ಒಳಗೊಂಡಂತೆ ಜಂಟಿ ಸರ್ವೆ ನಡೆಸಬೇಕು. ಕಾಡಿನ ಅಂಚಿನಲ್ಲಿರುವ ರೈತರ ಗಮನಕ್ಕೆ ತಂದು ಈ ಸರ್ವೆ ಕಾರ್ಯ ನಡೆಯಬೇಕು. ಗ್ರಾಮ ಪಂಚಾಯಿತಿಯಲ್ಲಿ ರೈತರ ವಿಶೇಷ ಸಭೆ ನಡೆಸಿ ಕಾನೂನು ಮಾಹಿತಿ ನೀಡಬೇಕು. ಸರ್ವೆಯಲ್ಲಿ ಗ್ರಾಮದ ಮೂಲಸೌಕರ್ಯಕ್ಕೆ ಬೇಕಾದ ಕಂದಾಯ ಭೂಮಿಯನ್ನು ಕಾದಿರಿಸಬೇಕು ಹಾಗೂ ಮೇ ೧೦ರ ಒಳಗಾಗಿ ಎಲ್ಲ ಗ್ರಾಮಗಳ ಜಂಟಿ ಸರ್ವೆ ನಡೆಸಿ ಫ್ಲೋಟಿಂಗ್ ಮಾಡಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, ಕಸ್ತೂರಿ ರಂಗನ್ ಮತ್ತು ಪುಷ್ಪಗಿರಿ ವನ್ಯಧಾಮದ ವಿರುದ್ದ ಕಳೆದ ೧೫ ವರ್ಷಗಳಿಂದ ಮಲೆನಾಡು ಜನ ಹಿತರಕ್ಷಣಾ ವೇದಿಕೆಯು ಹೋರಾಟ ನಡೆಸಿಕೊಂಡು ಬಂದಿದ್ದು, ಕಳೆದ ೮ ತಿಂಗಳ ಹಿಂದೆ ಸರ್ಕಾರವು ಜಂಟೀ ಸರ್ವೆ ನಡೆಸುವಂತೆ ಆದೇಶಿಸಿ ಸಮಸ್ಯೆಗೆ ಪರಿಹಾರ ನೀಡಿದೆ. ಸರ್ವೆಯ ಮೂಲಕ ಕಂದಾಯ, ಅರಣ್ಯ ಇಲಾಖೆಯೆಂದು ಬೇರ್ಪಡಿಸಿ ಕಾನೂನಾತ್ಮಕವಾಗಿ ಹಕ್ಕು ಪತ್ರ ನೀಡಬೇಕು. ಅದರಂತೆ ಸರ್ವೆ ನಡೆಸಬೇಕು ಅಲ್ಲದೆ ಮೂಲಭೂತ ಸೌಕರ್ಯ ಕಲ್ಪಿಸುವ ಬಗ್ಗೆ ಖಾತ್ರಿ ನೀಡಬೇಕು ಎಂದು ಆಗ್ರಹಿಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಜಂಟೀ ಸರ್ವೆ ನಡೆಸದಿದ್ದಲ್ಲಿ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ, ಪಶ್ಚಿಮ ಘಟ್ಟಕ್ಕೆ ತಾಗಿಕೊಂಡಿರುವ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಈಗಾಗಲೇ ೨೯೦೦ ಮಂದಿಗೆ ಅಕ್ರಮ ಸಕ್ರಮ ಯೋಜನೆಯಡಿ ಜಮೀನು ಮಂಜೂರುಗೊಂಡಿದ್ದು, ಪಹಣಿ ಪತ್ರಿಕೆಯೂ ಆಗಿರುತ್ತದೆ. ಇಲ್ಲಿ ಮನೆ, ಕೊಟ್ಟಿಗೆ, ಕಟ್ಟಡ, ಕೃಷಿ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಜಂಟಿ ಸರ್ವೆ ನಡೆಸುವಂತೆ ಸರ್ಕಾರ ಸೂಚನೆ ನೀಡಿ ೮ ತಿಂಗಳು ಕಳೆದಿದೆ. ಆದರೆ ಈ ತನಕ ಜಂಟೀ ಸರ್ವೆ ಮತ್ತು ಫ್ಲೋಟಿಂಗ್ ಮಾಡಲಾಗಿಲ್ಲ. ಜಂಟೀ ಸರ್ವೆ ನಡೆಸಿದಲ್ಲಿ ಮಾತ್ರ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮುಂದಿನ ೧೫ ದಿನಗಳ ಒಳಗಾಗಿ ಜಂಟೀ ಸರ್ವೆಗೆ ಮುಂದಾಗದಿದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.ಮನವಿ ಸಲ್ಲಿಸುವ ಸಂದರ್ಭದಲ್ಲಿ ನ್ಯಾಯವಾದಿ ಲೋಕೇಶ್ ಎಂ.ಜೆ, ಎಪಿಎಂಸಿ ಮಾಜಿ ಸದಸ್ಯ ಕುಶಾಲಪ್ಪ ಗೌಡ, ಪ್ರಮುಖರಾದ ಅಶೋಕ್ ಕುಮಾರ್, ಭರತ್ ಪಾಲೆಮಜಲು, ತೀರ್ಥರಾಮ ಎನ್.ಕೆ, ದೇವಿ ಪ್ರಸಾದ್ ಬಿ, ರಾಜೇಶ್ ಕೆ.ಎಸ್, ವಿನಯ ಕೆ, ದುರ್ಗಾ ಪ್ರಸಾದ್, ಕೆ ಗಣೇಶ್, ವಿನಯ ಕುಮಾರಿ ಬಳಕ್ಕ, ಪವಿತ್ರ ಪಿಲತ್ತಡಿ, ಯೋಗೇಂದ್ರ, ಪ್ರಭಾಕರ ಬಿ, ರಮಾನಂದ ಎ, ಜನಾರ್ಧನ ಗೌಡ, ಯುವರಾಜ, ರಾಮಣ್ಣ ಗೌಡ, ಗುರುಪ್ರಸಾದ್ ಪಂಜ, ರಂಜಿತ್ ಜಬಳೆ, ದಯಾನಂದ ಬಿ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!