ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಸಂಜೀವಿನಿ ಟ್ರಸ್ಟ್ ಹಾಗೂ ಹಸಿರು ಪಡೆ ವತಿಯಿಂದ ಬಂಡೀಪುರ ಉಳಿಸಿ ಅಭಿಯಾನದ ಅಂಗವಾಗಿ ನಗರದ ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಯಾವುದೇ ಕಾರಣಕ್ಕೂ ಬಂಡೀಪುರ ರಾತ್ರಿ ಸಂಚಾರ ತೆರವು ಬೇಡ ಎಂದು ಆಗ್ರಹಿಸಿದರು.ನಗರದ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ಯಾವುದೇ ಒತ್ತಡಕ್ಕೂ ಮಣಿಯದೇ ಬಂಡೀಪುರ ರಾತ್ರಿ ಸಂಚಾರ ತೆರವು ಮಾಡಬೇಡಿ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿರುವುದು ವನ್ಯಜೀವಿಗಳ ಸ್ವಚ್ಛಂದ ಓಡಾಟಕ್ಕೆ ಆಡಚಣೆ ಆಗದಿರಲಿ ಎಂಬ ಕಾರಣಕ್ಕಾಗಿ ಹಾಗೂ ವನ್ಯಜೀವಿ ಹಾಗೂ ಪರಿಸರ ಉಳಿವಿಗಾಗಿ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು. ರಾತ್ರಿ ವೇಳೆ ವಿಧಿಸಿರುವ ಸಂಚಾರ ನಿಬಂಧವನ್ನು ತೆರವುಗೊಳಿಸಲು ಪ್ರಭಾವಿಗಳು ಪದೇ ಪದೇ ರಾಜಕೀಯ ಲಾಬಿ ನಡೆಸುತ್ತಿರುವುದು ಖಂಡನೀಯ ಎಂದರು.ಬಂಡೀಪುರ ರಾಷ್ಟ್ರೀಯ ಉದ್ಯಾನ ಅತ್ಯುತ್ತಮ ಹುಲಿ ರಕ್ಷಿತಾರಣ್ಯ ಈ ರಕ್ಷಿತಾರಣ್ಯದಲ್ಲಿ ೧೬೦ಕ್ಕೂ ಹೆಚ್ಚಿನ ಹುಲಿಗಳಿರುವುದು ಹೆಮ್ಮೆಯ ವಿಚಾರ. ಸಾವಿರಕ್ಕೂ ಹೆಚ್ಚು ಆನೆಗಳಿಗೆ ಇದು ನೆಚ್ಚಿನ ತಾಣ. ಹುಲಿಗಳು ಅರಣ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಕಾಡು ಸಮತೋಲನ ಕಾಯ್ದುಕೊಂಡಿದೆ. ಹೈಕೋರ್ಟ್ ಮಾತ್ರವಲ್ಲ ಸುಪ್ರೀಂಕೋರ್ಟ್ ಕೂಡ ನಿಷೇಧದ ಆದೇಶವನ್ನು ಎತ್ತಿ ಹಿಡಿದಿದೆ. ಕೆಲವು ರಾಜಕಾರಣಿಗಳು ತಮ್ಮ ರಾಜಕೀಯ ಉದ್ದೇಶಕ್ಕಾಗಿ, ವರಿಷ್ಠರನ್ನು ಓಲೈಸಲಿಕ್ಕಾಗಿ ನಿರ್ಬಂಧ ತೆರವುಗೊಳಿಸಲು ಲಾಬಿ ಮಾಡುವುದು ತರವಲ್ಲ. ಯಾರದೋ ಸ್ವಾರ್ಥಕ್ಕೆ ಮುಗ್ಧ ಪ್ರಾಣಿಗಳನ್ನು ಬಲಿಕೊಡುವುದು ಸರಿಯಲ್ಲ ಎಂದರು.
ಪರಿಸರ, ವನ್ಯಜೀವಿಗಳ ವಿಚಾರದಲ್ಲಿ ಯಾವುದೇ ಲಾಬಿ, ರಾಜಕೀಯಕ್ಕೆ ಅವಕಾಶ ಕೊಡದೇ ಈ ಹಾದಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕಾಗಿದೆ ಎಂದರು. ಮಾನವ ಸರಪಳಿಯಲ್ಲಿ ಸಂಜೀವಿನಿ ಟ್ಟಸ್ಟ್ ಕಾರ್ಯದರ್ಶಿ ಸತೀಶ್‌ಕುಮಾರ್ ಹಾಗೂ ಪದಾಧಿಕಾರಿಗಳು, ಹಸಿರು ಪಡೆಯ ಗೌರಿ, ಅಕ್ಷತ್, ರಾಧ, ಜ್ಯೋತಿ, ಮೇಘಶ್ರೀ, ಲತಾ, ಲಯನ್ಸ್ ಸಂಸ್ಥೆಯ ಡಾ. ಬಸವರಾಜೇಂದ್ರ, ಡಾ. ಶ್ವೇತಾ, ಚೇತನ್, ರೋಟರಿಯ ನಾಗರಾಜ್, ಸುರೇಶ್, ರೋಟರಿ ಸಿಲ್ಕ್ ಸಿಟಿಯ ಮಾಣಿಕ್ ಚಂದ್ ಸಿರ್ವಿ, ಅಜಯ್, ಇನ್ನರ್ ವ್ಹೀಲ್ ಪೂಜಾ, ಪತಂಜಲಿ ಕುಮಾರಸ್ವಾಮಿ, ನಿಜಗುಣ ಸಿದ್ದರಾಜು, ಯೋಗಾ ಪ್ರಕಾಶ್, ದೊರೆಸ್ವಾಮಿ, ವಿರಾಟ್ ಶಿವು, ರಮೇಶ್, ಮಹಮದ್ ಗೌಸ್, ಔಷಧಿ ವ್ಯಾಪಾರಿ ಸಂಘದ ಆದರ್ಶ, ಹಿರಿಯರಾದ ಎ.ಡಿ. ಸಿಲ್ವಾ, ಇತರರು ಭಾಗವಹಿಸಿದ್ದರು.