ಹಾವೇರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ವೋಟರ್ ಸ್ಲಿಪ್ ವಿತರಣೆ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆಸಬೇಕು. ಯಾವುದೇ ದೂರು ಹಾಗೂ ಗೊಂದಲಗಳು ಉಂಟಾಗದಂತೆ ಕ್ಷೇತ್ರವಾರು ನಿಯೋಜಿತಗೊಂಡ ಸಹಾಯಕ ಚುನಾವಣಾಧಿಕಾರಿಗಳು ಮತಗಟ್ಟೆವಾರು ನಿಗಾವಹಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕರಿ ರಘುನಂದನ್ ಮೂರ್ತಿ ಅವರು ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸಭಾವಾರು ನೇಮಕಗೊಂಡಿರುವ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲಗಾರಗಳು, ಅಂಚೆ ಮತಪತ್ರ, ಸಾಮಾಗ್ರಿ ನಿರ್ವಹಣೆ, ಮತದಾನದ ಅಂಕಿಅಂಶ ನಿರ್ವಹಣೆ, ಮತದಾನ ವೋಟರ್ ಸ್ಲೀಪ್ ವಿತರಣಾ ತಂಡಗಳೊಂದಗೆ ಪೂರ್ವಸಿದ್ಧತಾ ಸಭೆ ನಡೆಸಿದ ಅವರು, ವೋಟರ್ ಸ್ಲೀಪ್‌ಗಳು ಮತದಾರರಿಗೆ ತಲುಪಿರುವ ಕುರಿತಂತೆ ಖಚಿತಪಡಿಸಿಕೊಳ್ಳಬೇಕು. ಮತಗಟ್ಟೆವಾರು ಬಿ.ಎಲ್.ಒಗಳ ತಪಾಸಣೆ ನಡೆಸಬೇಕು. ಮತಗಟ್ಟೆಗಳಿಗೆ ವಿಜಿಟ್ ಮಾಡಿ ಪರಿಶೀಲನೆ ಮಾಡಬೇಕು. ಸ್ಥಳಾಂತರಗೊಂಡ ಮತದಾರರು ಹಾಗೂ ಮರಣ ಹೊಂದಿದ ಮತದಾರರ ವೋಟರ್ ಸ್ಲೀಪ್‌ಗಳನ್ನು ಸುರಕ್ಷಿತವಾಗಿ ಹಿಂದಿರುಗಿಸಬೇಕು. ಯಾವೊಬ್ಬ ಮತದಾರನು ವೋಟರ್ ಸ್ಲೀಪ್ ತಲುಪಿಲ್ಲ ಎಂಬ ದೂರುಗಳು ಬರಬಾರದು ಎಂದು ನಿರ್ದೇಶನ ನೀಡಿದರು.ಅಂಚೆ ಮತಪತ್ರ ಹಾಗೂ ಇಡಿಸಿ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಬೇಕು. ಲೋಪವಾದರೆ ಸಹಾಯಕ ಚುನಾವಣಾಧಿಕಾರಿಗಳನ್ನು ಹೊಣೆ ಮಾಡಲಾಗುವುದು. ಇಡಿಸಿ ಮತ್ತು ಅಂಚೆ ಮತದಾನ ಪ್ರಕ್ರಿಯೆಕೈಗೊಳ್ಳಲು ತಂಡಗಳನ್ನು ರಚಿಸಿ ವ್ಯವಸ್ಥಿತವಾಗಿ ನಿರ್ವಹಣೆಗೆ ಸಲಹೆ ನೀಡಿದರು.ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತದಾನ ದಿನದ ನಿರ್ವಹಣೆ, ಎನ್‌ಕ್ರೋರ್ ಆ್ಯಪ್‌ಗಳಲ್ಲಿ ಮತದಾನದ ನಿಖರವಾದ ಪ್ರಮಾಣವನ್ನು ಪ್ರತಿ ಎರಡು ಗಂಟೆಗೊಮ್ಮೆ ವರದಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಮತದಾನದ ಪ್ರಮಾಣ ಸಂಗ್ರಹಣೆ ಹಾಗೂ ನಿಗದಿತ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುವ ನಿಟ್ಟಿನಲ್ಲಿ ವಿಧಾನಸಭಾ ಕ್ಷೇತ್ರವಾರು ಹಾಗೂ ಮತಗಟ್ಟೆವಾರು ತಂಡಗಳನ್ನು ರಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಎರಡನೇ ಸುತ್ತಿನ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಾಗಾರ ಕರ್ತವ್ಯಕ್ಕೆ ನಿಯೋಜಿತಗೊಂಡ ತಾಲೂಕು ಕೇಂದ್ರಗಳಲ್ಲಿ ಆಯೋಜಿಸಬೇಕು. ಇದಕ್ಕಾಗಿ ವ್ಯವಸ್ಥಿತವಾಗಿ ಬಸ್‌ಗಳ ವ್ಯವಸ್ಥೆ ಕುರಿತಂತೆ ಮಾಹಿತಿ ನೀಡಬೇಕು. ಈ ಉದ್ದೇಶಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜನೆ ಮಾಡಲಾಗಿದೆ. ತರಬೇತಿ ಅವಧಿಯಲ್ಲಿ ಇಡಿಸಿ, ಅಂಚೆ ಮತದಾನ, ಮತಗಟ್ಟೆಗಳ ನಿರ್ವಹಣೆ, ಮತದಾನ ಪ್ರಕ್ರಿಯೆ ಹಾಗೂ ವಿವಿಧ ನಮೂನೆ ಹಾಗೂ ಲಕೋಟೆಗಳ ಕುರಿತಂತೆ ನಿಖರವಾದ ಮಾಹಿತಿ ಹಾಗೂ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತಂತೆ ಸರಿಯಾದ ಮಾಹಿತಿಯನ್ನು ನೀಡುವಂತೆ ಸೂಚನೆ ನೀಡಿದರು.ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರು ವಿಧಾನಸಭಾ ಕ್ಷೇತ್ರವಾರು ರೂಟ್ ಮ್ಯಾಪ್, ವಾಹನಗಳ ಬೇಡಿಕೆ, ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಕುರಿತಂತೆ ವಿವಿಧ ಮಾಹಿತಿಗಳ ಕುರಿತಂತೆ ವಿವರಿಸಿದರು.ಸಭೆಯಲ್ಲಿ ವಿಧಾನಸಭಾ ಕ್ಷೇತ್ರವಾರು ನೇಮಕಗೊಂಡಿರುವ ಸಹಾಯಕ ಚುನಾವಣಾಧಿಕಾರಿಗಳಾದ ಎಚ್.ಬಿ. ಚೆನ್ನಪ್ಪ, ನಾಗರಾಜ, ಮಹ್ಮದ್ ಖಿಜರ್, ಮಮತಾ ಹೊಸಗೌಡ್ರ, ರೇಷ್ಮಾ ಕೌಸರ್, ಎಂ.ಸಿ.ರಮೇಶ್, ವಿವಿಧ ತಾಲೂಕುಗಳ ತಹಸೀಲ್ದಾರಗಳಾದ ನಾಗರಾಜ, ರೇಣುಕಾ, ಡಾ.ಪಟ್ಟರಾಜಗೌಡ, ಸುರೇಶಕುಮಾರ, ಪ್ರಭಾಕರಗೌಡ, ಗುರುಬಸವರಾಜ, ಭರತರಾಜ್ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.