ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವೀಲ್‌ಚೇರ್ ವಿತರಿಸಲಾಯಿತು. 25,410 ರು. ವೆಚ್ಚದ 10 ವೀಲ್‌ಚೇರ್‌ಗಳು ಮತ್ತು 17 ಸಾವಿರ ರು. ವೆಚ್ಚದ 19 ವೀಲ್‌ಚೇರ್‌ಗಳನ್ನು ಕೊಡಗು ಮತ್ತು ಹುಣಸೂರು ವಿಭಾಗಕ್ಕೆ ಸೇರಿದ 29 ವಿಶೇಷಚೇತನರಿಗೆ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಜಿಲ್ಲಾ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಕೆ.ಜೆ.ವಿಮಲ ಅವರು, ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿದಾಗ ವಿಶೇಷಚೇತನರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಸಹಕಾರಿಯಾಗಲಿದೆ ಎಂದರು.ಜಿಲ್ಲೆಯಲ್ಲಿ 6,400 ವಿಶೇಷಚೇತನರಿಗೆ ಗುರುತಿನ ಚೀಟಿ ವಿತರಿಸಲಾಗಿದ್ದು, ಸರ್ಕಾರದಿಂದ ವಿಶೇಷಚೇತನರಿಗೆ ಅಗತ್ಯ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ಹಲವು ಕಾರಣಗಳಿಂದ ಮನುಷ್ಯರಲ್ಲಿ ವಿಕಲತೆ ಉಂಟಾಗುತ್ತದೆ. ಆದ್ದರಿಂದ ಧೃತಿಗೆಡದೆ ಬದುಕು ಸವೆಸಬೇಕು. ಸವಾಲುಗಳನ್ನು ಎದುರಿಸಬೇಕು ಎಂದು ಹೇಳಿದರು.
ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ರತ್ನಾಕರ ರೈ ಮಾತನಾಡಿ, ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ವಿಶೇಷಚೇತನರಿಗೆ ಕೈಲಾದಷ್ಟು ಅಗತ್ಯ ಸಹಕಾರ ಕಲ್ಪಿಸಲಾಗುತ್ತದೆ. ಆ ನಿಟ್ಟಿನಲ್ಲಿ ಇಂತಹ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದರು.ವಿಶೇಷಚೇತನರ ಜಿಲ್ಲಾ ಸಂಘದ ಅಧ್ಯಕ್ಷ ಮಹೇಶ್ವರ್ ಮಾತನಾಡಿ, ವೀಲ್‌ಚೇರ್‌ಗಳನ್ನು ಪಡೆದು ಮೂಲೆಗೆ ಎಸೆಯಬಾರದು. ಇಂತಹ ಸಾಧನ ಸಲಕರಣೆಗಳನ್ನು ಬಳಸಿಕೊಂಡು ಸಾಧ್ಯವಾದಷ್ಟು ಬದುಕುದೂಡಲು ಪ್ರಯತ್ನಿಸಬೇಕು ಎಂದರು.
ಸ್ವಾಮಿ ವಿವೇಕಾನಂದ ಯೂತ್ ಮೂವೆಮೆಂಟ್‌ನ ಖಜಾಂಚಿ ಡಾ.ಕೆ.ಎನ್.ಚಂದ್ರಶೇಖರ್ ಮಾತನಾಡಿ, ಸ್ವಾಮಿ ವಿವೇಕಾನಂದ ಯೂತ್ ಮೂವೆಮೆಂಟ್‌ನಲ್ಲಿ 850 ಕ್ಕೂ ಹೆಚ್ಚು ಜನರು ಕರ್ತವ್ಯ ನಿರ್ವಹಿಸುತ್ತಿದ್ದು, ವಿಶೇಷಚೇತನರು ಹಾಗೂ ಇತರರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಮುಂದಾಗಲಾಗಿದೆ ಎಂದು ಹೇಳಿದರು.ವಿಶೇಷಚೇತನರಿಗೆ ಬೇಕಿರುವ ಸಾಧನೆ ಸಲಕರಣೆಗಳನ್ನು ವಿತರಿಸುವಲ್ಲಿ ಹಲವು ವರ್ಷಗಳಿಂದ ಶ್ರಮಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಅಗತ್ಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಬದಲಾವಣೆಯತ್ತ ಹೆಜ್ಜೆ ಹಾಕಬೇಕು. ಜೊತೆಗೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಚ್.ಆರ್.ಮುರಳಿಧರ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಬೋರಯ್ಯ, ವೆಂಕಚಾರಿ, ಅಭಿಷೇಕ್, ಸುನಿತಾ, ಇತರರು ಇದ್ದರು.