ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಇಲ್ಲಿನ ಎಸ್.ಜೆಎಂ ಪ್ರೌಢಶಾಲೆಯಲ್ಲಿ ಸರ್ ಸಿ.ವಿ. ರಾಮನ್ ಜ್ಞಾಪಕಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮ ನಡೆಸಲಾಯಿತು.ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕಿ ಪ್ರೇಮಾ ಉದ್ಘಾಟಿಸಿದರು. ನಂತರ ಮಾತನಾಡಿ, ಸಿ.ವಿ. ರಾಮನ್ ಅವರು ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಇಂದು ವಿಜ್ಞಾನ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ದೇಶದಲ್ಲಿ ವಿಜ್ಞಾನ ಬೆಳೆದಂತೆ ಅಭಿವೃದ್ಧಿಯಲ್ಲಿಯೂ ಹೆಚ್ಚಿನ ಸಾಧನೆ ಮಾಡುವುದನ್ನು ಕಾಣಬಹುದಾಗಿದೆ. ಎಲ್ಲರೂ ತಮ್ಮ ಜೀವನದಲ್ಲಿ ಸಿ.ವಿ. ರಾಮನ್ ಆದರ್ಶಗಳನ್ನು ಮೈಗೂಡಿಸಿಕೊಂಡು ಉಜ್ವಲ ದೇಶ ಕಟ್ಟಲು ಮುಂದಾಗಬೇಕೆಂದರು.
ಕಾರ್ಯಕ್ರಮದ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸುವುದರ ಮೂಲಕ ಹಾಗೂ ಪ್ರತಿಜ್ಞಾವಿಧಿಯನ್ನು ವೈಚಾರಿಕ ಮನೋಭಾವನೆ ಬೆಳೆಸುವ ಹಿನ್ನೆಲೆಯಲ್ಲಿ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ರಾಣಿ, ರವೀಂದ್ರ ಸೇರಿದಂತೆ ಶಿಕ್ಷಕರು ಹಾಜರಿದ್ದರು.ಐಗೂರು ಪ್ರೌಢಶಾಲೆ:ತಾಲೂಕಿನ ಐಗೂರು ಸರ್ಕಾರಿ ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ವಿಜ್ಞಾನ ಸಂಘದ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು.
ವಿಜ್ಞಾನ ದಿನಾಚರಣೆಯ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವ ಕುರಿತು ಭಾರತೀಯ ಸಂವಿಧಾನದ 51(ಎಚ್) ವಿಧಿಯ ಮಹತ್ವ ತಿಳಿಸಿ, ವೈಜ್ಞಾನಿಕ ಮನೋಭಾವ ಬೆಳೆಸುವ ಕುರಿತಾದ ಪ್ರತಿಜ್ಞಾವಿಧಿಯನ್ನು ವಿಜ್ಞಾನ ಶಿಕ್ಷಕ ಎಸ್.ಎಸ್. ರಂಜಿನಿ ಬೋಧಿಸಿದರುದಿನದ ಮಹತ್ವದ ಕುರಿತು ಮುಖ್ಯ ಶಿಕ್ಷಕ ಎಂ.ಎಂ. ಯಶ್ವಂತ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು. ನಮ್ಮ ಶಾಲೆಯಲ್ಲಿ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ ಇದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.ಶಾಲಾ ಶಿಕ್ಷಕರಾದ ಎಸ್.ಕೆ.ರಾಜರತ್ನ, ಮಂಜುನಾಥ್, ಗುಲಾಬಿ ಪಾಲ್ಗೊಂಡಿದ್ದರು.
ಶಾಲಾ ವಿದ್ಯಾರ್ಥಿಗಳು ವಿಜ್ಞಾನ ಗೀತೆಗಳನ್ನು ಹಾಡಿದರು. ರಾಮನ್ ಪರಿಣಾಮ ಮತ್ತು ದಿನದ ಮಹತ್ವದ ಕುರಿತು ವಿದ್ಯಾರ್ಥಿಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಯೋಗ ಪ್ರಾತ್ಯಕ್ಷಿಕೆ ನಡೆಸಲಾಯಿತು. 22 ತಂಡಗಳು ಭಾಗವಹಿಸಿದ್ದವು. ಉತ್ತಮ ಪ್ರಾತ್ಯಕ್ಷಕೆ ನೀಡಿದ ಮೂರು ತಂಡಗಳಿಗೆ ಬಹುಮಾನ ನೀಡಲಾಯಿತು.