ಕುಶಾಲನಗರ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೊಡಗು ಜಿಲ್ಲೆಗೆ ಭೇಟಿ ಹಿನ್ನೆಲೆಯಲ್ಲಿ ಕುಶಾಲನಗರ ಸಮೀಪದ ಹಾರಂಗಿ ಅಣೆಕಟ್ಟು ಆವರಣದಲ್ಲಿ ಹೆಲಿಪ್ಯಾಡ್ ಬಳಿ ಮುಖ್ಯಮಂತ್ರಿಗಳನ್ನು ಬರಮಾಡಿಕೊಳ್ಳಲು ಜಿಲ್ಲಾಡಳಿತ ಎಲ್ಲ ರೀತಿಯ ವ್ಯವಸ್ಥೆ ಸಿದ್ಧಗೊಳಿಸಿತ್ತು.
ಹಾರಂಗಿ ಹೆಲಿಪ್ಯಾಡ್ ಬಳಿ ಮುಖ್ಯಮಂತ್ರಿಗಳನ್ನು ಬರಮಾಡಿಕೊಳ್ಳಲು ಮಡಿಕೇರಿ ಉಪ ವಿಭಾಗಾಧಿಕಾರಿ ನಿತಿನ್ ಚೆಕ್ಕಿ ಸೇರಿದಂತೆ ಹಿರಿಯ ಅಧಿಕಾರಿಗಳು ಸೇರದಂತೆ ಮುಖ್ಯಮಂತ್ರಿಗಳಿಗೆ ಗೌರವ ರಕ್ಷೆ ಹಾಗೂ ಪ್ರೋಟೋಕಾಲ್ ಸಿದ್ಧತೆ ನಡೆಸಿದ್ದರು.ಬೆಳಗ್ಗೆ 11,30ಕ್ಕೆ ಭಾಗಮಂಡಲ ವ್ಯಾಪ್ತಿಯಲ್ಲಿ ಹವಾಮಾನ ವೈಪರಿತ್ಯ ಕಂಡುಬಂದ ಬೆನ್ನಲ್ಲೇ ಹಾರಂಗಿ ಹೆಲಿಪ್ಯಾಡ್ ನಲ್ಲಿ ಅಧಿಕಾರಿಗಳು ಅಲರ್ಟ್ ಆಗ ತೊಡಗಿದರು. ಇದೇ ಸಂದರ್ಭ 11.45ಕ್ಕೆ ಆಗಸದಲ್ಲಿ ಖಾಸಗಿ ಹೆಲಿಕಾಪ್ಟರೊಂದರ ಹಾರಾಟ ಗೋಚರಿಸಿದ್ದೇ ತಡ ತಕ್ಷಣ ಭದ್ರತಾ ಪಡೆ ಸೇರಿದಂತೆ ಅಧಿಕಾರಿಗಳು, ಗೌರವ ನಕ್ಷೆ ನೀಡಲು ಬಂದಿದ್ದ ಅಧಿಕಾರಿ ಸಿಬ್ಬಂದಿ, ಪ್ರೋಟೋಕಾಲ್ ವಾಹನಗಳು ಹೆಲಿಪ್ಯಾಡ್ ಬಳಿ ಸೇರಿ ಮುಖ್ಯಮಂತ್ರಿಗಳನ್ನು ಬರಮಾಡಿಕೊಳ್ಳಲು ತುರಾತುರಿಯಲ್ಲಿ ಸಿದ್ದರಾಗುತ್ತಿದ್ದ ದೃಶ್ಯ ಕಂಡುಬಂತು. ಮಡಿಕೇರಿಯ ವಿವಾಹ ಕಾರ್ಯಕ್ರಮಕ್ಕೆ ಖಾಸಗಿ ವ್ಯಕ್ತಿಗಳನ್ನು ಹೊತ್ತ ಆ ಖಾಸಗಿ ಹೆಲಿಕಾಪ್ಟರ್ ಮಡಿಕೇರಿ ಕಡೆಗೆ ತೆರಳಿದ ಬಗ್ಗೆ ಮಾಹಿತಿ ಲಭಿಸುವುದರೊಂದಿಗೆ ಇತ್ತ ಅಧಿಕಾರಿಗಳು ಮತ್ತೆ ಮುಖ್ಯಮಂತ್ರಿಗಳ ಆಗಮನಕ್ಕೆ ಕ್ಷಣಗಣನೆ ಎಣಿಸುತ್ತಿದ್ದ ವೇಳೆ ಭಾಗಮಂಡಲದಲ್ಲಿ ಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಲ್ಯಾಂಡ್ ಆಗಿರುವ ಮಾಹಿತಿ ಬಂದು ಅಧಿಕಾರಿಗಳು ನಿರಾಳರಾದರು.