ಹುಬ್ಬಳ್ಳಿ:
ಇಲ್ಲಿನ ತಾಲೂಕು ಆಡಳಿತಸೌಧದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಜನಸ್ನೇಹಿಯಾಗಿ ಮಾಡಲು ಕ್ರಮಕೈಗೊಳ್ಳಲಾಗುತ್ತಿದ್ದು, ಪ್ರತಿಯೊಂದು ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ತಾಲೂಕು ಹಾಗೂ ಗ್ರಾಮಮಟ್ಟದಲ್ಲಿ ದೂರು ಸ್ವೀಕಾರ ವ್ಯವಸ್ಥೆ ಬಲಪಡಿಸಲಾಗುತ್ತಿದೆ. ಬರುವ ದೂರುಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.ವಿಶೇಷ ಕಾರ್ಯಕ್ರಮ:
ಶೈಕ್ಷಣಿಕ ಕ್ಷೇತ್ರದಲ್ಲಿ ಜಿಲ್ಲೆಗೆ ವಿದ್ಯಾ ಕಾಶಿ ಎಂಬ ಹೆಗ್ಗಳಿಕೆ ಇರುವ ಹಿನ್ನೆಲೆಯಲ್ಲಿ ಈ ವರ್ಷ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ರ‍್ಯಾಂಕ್ ಗಳಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಹೆಚ್ಚುವರಿ ತರಗತಿ, ಮಾರ್ಗದರ್ಶನ ಶಿಬಿರ, ಪ್ರಶ್ನೆಪತ್ರಿಕೆ ಅಭ್ಯಾಸ ಹಾಗೂ ವಿಷಯ ತಜ್ಞರಿಂದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಬಾರಿ ರಾಜ್ಯಮಟ್ಟದಲ್ಲಿ ಧಾರವಾಡ ಜಿಲ್ಲೆ ಉನ್ನತ ಸ್ಥಾನ ಪಡೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನೀರಿನ ಸಮಸ್ಯೆಯಾಗದಂತೆ ಕ್ರಮ:
ಬೇಸಿಗೆ ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಪಂ, ನಗರಸಭೆ ಹಾಗೂ ನೀರು ಸರಬರಾಜು ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ನೀರಿನ ಮೂಲಗಳನ್ನು ಗುರುತಿಸಲಾಗುತ್ತಿದೆ. ಜನಸಾಮಾನ್ಯರು ಮಾತ್ರವಲ್ಲದೆ ಜಾನುವಾರುಗಳಿಗೆ ಸಹ ಕುಡಿಯುವ ನೀರಿನ ಸಮಸ್ಯೆಗಳು ಆಗದಂತೆ ಕ್ರಮಕೈಗೊಳ್ಳಲಾಗುವುದು. ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯಕ್ಷಮತೆ ಕುರಿತು ಜಿಪಂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಕಾರ್ಯ ನಿರ್ವಹಿಸದ ಘಟಕಗಳನ್ನು ದುರಸ್ತಿ ಮಾಡಿ ಮರುಚಾಲನೆ ಮಾಡುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತದೆ ಎಂದರು.ಬೀದಿನಾಯಿಗಳ ಸಮಸ್ಯೆ ನಿಯಂತ್ರಣಕ್ಕೆ ತರಲು ಸಮಗ್ರ ಸಮೀಕ್ಷೆ ನಡೆಸಲಾಗಿದೆ. ಈಗಾಗಲೇ ಹಲವೆಡೆ ಗುರುತು ಮಾಡುವ ಕಾರ್ಯ ಪೂರ್ಣಗೊಂಡಿದ್ದು, ಬೀದಿ ನಾಯಿಗಳ ರಕ್ಷಣೆ, ಲಸಿಕೆ ಹಾಗೂ ಅವುಗಳನ್ನು ಸೂಕ್ತ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸುವ ಯೋಜನೆ ರೂಪಿಸಲಾಗಿದೆ.
ಪ್ರತಿ ತಿಂಗಳು ಭೇಟಿ:ಜಿಲ್ಲಾಡಳಿತವು ಪ್ರತಿ ತಿಂಗಳು ಕನಿಷ್ಠ ಒಂದು ಬಾರಿ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಿದೆ. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಜತೆ ನೇರ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ, ಅವುಗಳನ್ನು ತ್ವರಿತವಾಗಿ ಪರಿಹರಿಸುವಂತೆ ತಹಸೀಲ್ದಾರರಿಗೆ ಸೂಚಿಸಿದರು. ಶಹರ ತಹಸೀಲ್ದಾರ್ ಮಹೇಶ ಗಸ್ತೆ, ಗ್ರಾಮೀಣ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಗ್ರೇಡ್-2 ತಹಸೀಲ್ದಾರ್ ಶಿವಾನಂದ ಹೆಬ್ಬಳ್ಳಿ, ಕಂದಾಯ ನಿರೀಕ್ಷಕ ರವಿ ಬೆಣ್ಣೂರ ಸೇರಿದಂತೆ ಹಲವರಿದ್ದರು.