ಕನ್ನಡಪ್ರಭ ವಾರ್ತೆ ತುಮಕೂರು ಹತ್ತಿ ಬೀಜ ಬೆಳೆದುಕೊಟ್ಟ ಜಿಲ್ಲೆಯ ಮಧುಗಿರಿ, ಶಿರಾ, ಪಾವಗಡ ಮತ್ತು ಕೊರಟಗೆರೆ ತಾಲೂಕುಗಳ ರೈತರಿಗೆ ಬೀಜ ಉತ್ಪಾದನಾ ಕಂಪನಿಗಳಿಂದ ಸುಮಾರು 500 ಕೋಟಿ ರು ಬಾಕಿ ಬರಬೇಕಿದ್ದು, ಜಿಲ್ಲಾಡಳಿತ ಮದ್ಯ ಪ್ರವೇಶಿಸಿ ರೈತರ ಬಾಕಿ ಕೊಡಿಸುವುದರ ಜೊತೆಗೆ ಬೀಜ ಉತ್ಪಾದನಾ ಕಾಯ್ದೆ ಅನ್ವಯ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸೂಕ್ತ ನಿರ್ದೇಶನ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ಒತ್ತಾಯಿಸಿದ್ದಾರೆ. ನಗರದ ವಿಜ್ಞಾನ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10-20 ವರ್ಷಗಳಿಂದ ಜಿಲ್ಲೆಯ ಸುಮಾರು 9000 ಕ್ಕೂ ಹೆಚ್ಚು ರೈತರೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳದೆ 19000 ಎಕರೆ ಪ್ರದೇಶದಲ್ಲಿ ಹತ್ತಿ ಬೀಜ ಉತ್ಪಾದನೆ ಮಾಡಿಸಲಾಗುತ್ತಿದೆ.ರೈತರು ತಮ್ಮ ಭೂಮಿಗಳಲ್ಲಿ ಉತ್ಪಾದಿಸಿದ 2024 ರ ಸಾಲಿನಲ್ಲಿ ಬೀಜ ನೀಡಿದ ಬಾಕಿ 52 ಕೋಟಿಯ ಜೊತೆಗೆ, 2025 ರಲ್ಲಿ ಬೀಜ ಬೆಳೆದು ನೀಡಿದ 3 ತಿಂಗಳು ಕಳೆದರೂ ರೈತರಿಗೆ ನೀಡಬೇಕಾದ 500 ಕೋಟಿರು ಬಾಕಿ ನೀಡಿಲ್ಲ. ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ, ಔಷಧಗಳನ್ನು ನೀಡದೆ ರೈತರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಬೀಜ ಉತ್ಪಾದನಾ ಕಂಪನಿಗಳಿಂದ ಮೋಸ ಹೋಗಿರುವ ರೈತರಿಗೆ ನ್ಯಾಯಕೊಡಿಸಬೇಕು.ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದರು.ಒಂದು ಎಕರೆಯಲ್ಲಿ ಹತ್ತಿ ಬಿತ್ತನೆ ಬೀಜ ಬೆಳೆಯಲು ಸುಮಾರು 2 ಲಕ್ಷ ರು ಖರ್ಚು ಬರುತ್ತದೆ.ನೆರೆ ರಾಜ್ಯಗಳಾದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರಗಳ 22 ಬೀಜ ಉತ್ಪಾದನಾ ಕಂಪನಿಗಳಿಗೆ ರೈತರಿಗೆ ಒಂದಿಷ್ಟು ಮುಂಗಡ ಹಣ ನೀಡಿ, ಹತ್ತಿ ಬೀಜಗಳನ್ನು ಬೆಳೆಸಿಕೊಳ್ಳುತ್ತಿದ್ದು, ಸಂಸ್ಕರಣಾ ವೆಸ್ಟ್ಎಂದು 100 ಕೆ.ಜಿ.ಗೆ ಬದಲಾಗಿ 107 ತೂಕ ಮಾಡುವುದಲ್ಲದೆ, 45 ಕೆ.ಜಿ ಬ್ಯಾಗ್ ಮಾಡುವಾಗ 45.5 ಕೆ.ಜಿ. ತೂಗುವ ಮೂಲಕ ರೈತರನ್ನು ಶೋಷಣೆ ಮಾಡಲಾಗುತ್ತಿದೆ. ಅಲ್ಲದೆ ಬೀಜ ಕೊಂಡ ತಕ್ಷಣ ಹಣ ನೀಡುತ್ತಿಲ್ಲ. ಕಂಪನಿ ನೇರವಾಗಿ ವ್ಯವಹರಿಸದೆ ಏಜೆಂಟರ್ ಮೂಲಕ ಕೆಲಸ ನಡೆಸುತ್ತಿದೆ. ರೈತರಿಗೆ ಗುಣಮಟ್ಟದ ಬೀಜ, ಗೊಬ್ಬರ, ಔಷಧಗಳನ್ನು ನೀಡಿಲ್ಲ. ಬೆಳೆ ನಷ್ಟವಾದರೆ ಪರಿಹಾರವಿಲ್ಲ. ಹಾಗಾಗಿ ಹತ್ತಿ ಬೀಜ ಉತ್ಪಾದನಾ ಬೆಳೆಯನ್ನು ಫಸಲ್ ಭೀಮ ಯೋಜನೆಯ ಅಡಿಗೆ ಒಳಪಡಿಸಬೇಕು ಎಂದು ಜಿ.ಎಸ್.ಶಂಕರಪ್ಪಆಗ್ರಹಿಸಿದರು. ಬೀಜ ಕಂಪನಿಗಳು ಹಣ ನೀಡುವುದು 2024 ರಲ್ಲಿ ತಡವಾದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಸಲಾಗಿತ್ತು. ಈಗ ಅದೇ ರೀತಿಯ ಸಮಸ್ಯೆಗಳು ಮುಂದುವರೆದಿವೆ. ಹಾಗಾಗಿ ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡಿ ನ್ಯಾಯ ದೊರಕಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ. ರೈತರಿಗೆ ಗುಣಮಟ್ಟದ ಬೀಜ ಮತ್ತು ಪೂರಕ ವಸ್ತುಗಳನ್ನು ನೀಡಬೇಕು.ಬಾಕಿ ಇರುವ ಹಣವನ್ನು ತುರ್ತಾಗಿ ರೈತರಿಗೆ ನೀಡಬೇಕು. ಹತ್ತಿ ಬೀಜ ಬೆಳೆಯನ್ನು ಫಸಲ್ ಭೀಮಾ ಯೋಜನೆಗೆ ಒಳಪಡಿಸಬೇಕು.ಎಲ್ಲಾ ಬೀಜ ಕಂಪನಿಗಳು ಕಚೇರಿ ತೆರೆದು, ರೈತರೊಂದಿಗೆ ಒಪ್ಪಂದ ಮಾಡಿಕೊಂಡು ನೇರವಾಗಿ ರೈತರೊಂದಿಗೆ ವ್ಯವಹರಿಸಬೇಕುಎಂದು ಜಿ.ಎಸ್.ಶಂಕರಪ್ಪ ತಿಳಿಸಿದರು.ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಹತ್ತಿ ಬೀಜ ಉತ್ಪಾದನಾ ಕಂಪನಿಗಳು ಬೀಜೋತ್ಪಾದನಾ ಕಾಯ್ದೆಯ ನಿಯಮಗಳನ್ನೇ ಗಾಳಿಗೆ ತೂರಿ, ರೈತರೊಂದಿಗೆ ಯಾವುದೇ ಒಡಂಬಡಿಕೆ ಮಾಡಿಕೊಳ್ಳದೆ ಬಿತ್ತನೆ ಬೀಜವನ್ನು ಕೊಂಡು ಹಣ ನೀಡದೆ ಸತಾಯಿಸುತ್ತಿವೆ. ಇದೊಂದು ರೀತಿ ಹಗಲು ದರೋಡೆಯಂತಿದ್ದು, ಜಿಲ್ಲಾಡಳಿತ ಗಮನಹರಿಸಿ, ಸಮಸ್ಯೆಗೆ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯಎಂದರು.
ಕೋಟ್...
ರಾಮನಗರ ಜಿಲ್ಲೆಯ ಮಾಗಡಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಎಕ್ಸ್ಪ್ರೆಸ್ ಲಿಂಕ್ ಕೆನಾಲ್‌ಗೆ ಜಿಲ್ಲೆಯ ರೈತರ ವಿರೋಧವಿದೆ.2 5 ಸಾವಿರಕ್ಕು ಅಧಿಕ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದರ ಫಲವಾಗಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳ್ಳುವಂತೆ ಮಾಡಿ,ಇ ನ್ನೊಂದೆಡೆ ಲಿಂಕ್‌ಕೆನಾಲ್‌ಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸುತ್ತಿದೆ. ಯಾವ ಕಾರಣಕ್ಕೂ ಲಿಂಕ್ ಕೆನಾಲ್‌ಗೆ ಜಿಲ್ಲೆಯ ರೈತರು, ಜನರು ಅವಕಾಶ ಮಾಡಿಕೊಡುವುದಿಲ್ಲ. ಅಗತ್ಯ ಬಿದ್ದರೆ ಲಕ್ಷಾಂತರಜನರು ಬೀದಿಗಿಳಿದು ಸರಕಾರದ ವಿರುದ್ದ ಹೋರಾಟ ನಡೆಸುತ್ತೇವೆ- ಎ.ಗೋವಿಂದರಾಜು, ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ