ಸಕ್ಕರೆ ಕಾರ್ಖಾನೆ ಸ್ಥಾಪನೆ ಕೈಬಿಡಿ

KannadaprabhaNewsNetwork | Published : Jul 1, 2025 12:47 AM

ಮುದ್ದಾಬಳ್ಳಿ ಮತ್ತು ಗೊಂಡಬಾಳ ಸೀಮಾ ವ್ಯಾಪ್ತಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಬೇಡವೆಂದು ಜು.14, 2023ರಂದೇ ಪರಿಸರ ಇಲಾಖೆಯಿಂದ ಕರೆಯಲಾಗಿದ್ದ ಅಹವಾಲು ಸಭೆಯಲ್ಲಿ ಆಕ್ಷೇಪಿಸಿ ಮನವಿ ಸಲ್ಲಿಸಿದೆ. ಈ ಮಧ್ಯೆಯೂ ಯುಕೆಇಎಮ್ ಅಗ್ರೀ ಇನ್ಫ್ರಾ ಲಿಮಿಟೆಡ್‌ಗೆ ಕಾರ್ಖಾನೆ ಸ್ಥಾಪನೆಗೆ ಅನುಮತಿ ನೀಡಲಾಗಿದೆ.

ಕೊಪ್ಪಳ:

ತಾಲೂಕಿನ ಗೊಂಡಬಾಳ ಹಾಗೂ ಮುದ್ದಾಬಳ್ಳಿ ಸೀಮಾದಲ್ಲಿ ಯುಕೆಇಎಂ ಅಗ್ರೀ ಇನ್ಫ್ರಾ ಲಿಮಿಟೆಡ್ ಕಂಪನಿಯ ಸಕ್ಕರೆ ಕಾರ್ಖಾನೆ ಸ್ಥಾಪನೆ ಕೈಬಿಡುವಂತೆ ಗೊಂಡಬಾಳ-ಮುದ್ದಾಬಳ್ಳಿ ಸಕ್ಕರೆ ಕಾರ್ಖಾನೆ ಸ್ಥಾಪನೆ ವಿರೋಧಿ ಹೋರಾಟ ವೇದಿಕೆ ಶಾಸಕ ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿತು.

ತಾಲೂಕಿನ ಮುದ್ದಾಬಳ್ಳಿ ಮತ್ತು ಗೊಂಡಬಾಳ ಸೀಮಾ ವ್ಯಾಪ್ತಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಬೇಡವೆಂದು ಜು.14, 2023ರಂದೇ ಪರಿಸರ ಇಲಾಖೆಯಿಂದ ಕರೆಯಲಾಗಿದ್ದ ಅಹವಾಲು ಸಭೆಯಲ್ಲಿ ಆಕ್ಷೇಪಿಸಿ ಮನವಿ ಸಲ್ಲಿಸಿದೆ. ಈ ಮಧ್ಯೆಯೂ ಯುಕೆಇಎಮ್ ಅಗ್ರೀ ಇನ್ಫ್ರಾ ಲಿಮಿಟೆಡ್‌ಗೆ ಕಾರ್ಖಾನೆ ಸ್ಥಾಪನೆಗೆ ಅನುಮತಿ ನೀಡಲಾಗಿದೆ. ಈಗ ಗೊಂಡಬಾಳ ಗ್ರಾಪಂಗೆ ಕಂಪನಿಯು ಎನ್‌ಒಸಿ ಪಡೆಯಲು ಅರ್ಜಿ ಸಲ್ಲಿಸಿದ್ದು, ಇದಕ್ಕೂ ನಮ್ಮ ತಕರಾರಿದೆ. ಈಗಾಗಲೇ ಕಂಪನಿಯವರು ಕಾರ್ಖಾನೆ ಸ್ಥಾಪಿಸಲು ಎಲ್ಲ ಹಂತದ ಪರವಾನಗಿ ಪಡೆದಿದ್ದಾರೆ. ಜಿಲ್ಲಾಧಿಕಾರಿ ಹಂತದಲ್ಲಿಯೂ ಎನ್‌ಎ ಪರವಾನಗಿ ನೀಡಲಾಗಿದೆ. ಉದ್ದೇಶಿತ ಪ್ರದೇಶದಿಂದ ನಮ್ಮ ಹಳ್ಳಿಗಳು ಕೆಲವೇ ಮೀಟರ್‌ ದೂರದಲ್ಲಿವೆ. ಇದರಿಂದ ಕೃಷಿ ಚಟುವಟಿಕೆಗೆ ಹಾಗೂ ಜನಜೀವನಕ್ಕೆ ಸಮಸ್ಯೆಯಾಗುತ್ತದೆ ಎಂದು ಮನವರಿಕೆ ಮಾಡಲಾಯಿತು.

ಸಕ್ಕರೆ ಕಾರ್ಖಾನೆ ಸ್ಥಾಪನೆ ಸ್ಥಳವು ಗೊಂಡಬಾಳ-ಮುದ್ದಾಬಳ್ಳಿ ಗ್ರಾಮಕ್ಕೆ ಕೇವಲ ೫೦೦ ಮೀಟರ್‌ ಅಂತರದಲ್ಲಿದೆ. ಈ ಕಾರ್ಖಾನೆಯ ಉದ್ದೇಶಿತ ಜಾಗದಲ್ಲಿ ಈಗಾಗಲೇ ಸರ್ಕಾರಿ ಮೊರಾರ್ಜಿ ವಸತಿ ಶಾಲೆ ಪ್ರಾರಂಭಿಸಲು ಸರ್ಕಾರವೇ ಅನುಮತಿ ನೀಡಿದೆ. ಈ ಕಾರ್ಖಾನೆ ಆರಂಭಿಸಿದರೆ ಕಲುಷಿತ ನೀರಿನಿಂದ ತುಂಗಭದ್ರಾ ನದಿ, ಕೊಳವೆ ಬಾವಿಗಳು ಮಾಲಿನ್ಯಗೊಳಿಸುತ್ತದೆ. ಈ ಪ್ರದೇಶದಲ್ಲಿ ವಿವಿಧ ಬಗೆಯ ಪಕ್ಷಿ-ಪ್ರಭೇದಗಳಿದ್ದು ಅದರಲ್ಲೂ ರಾಷ್ಟ್ರೀಯ ಪಕ್ಷಿ ನವಿಲುಗಳ ಸಂತತಿ ಹೆಚ್ಚಿದೆ. ಅವುಗಳ ಸಂತತಿ ಸಹ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಾರ್ಖಾನೆ ಆರಂಭದಿಂದ ಶ್ವಾಸಕೋಶ, ಚರ್ಮರೋಗ, ಕ್ಯಾನ್ಸರ್‌ನಂತ ಮಾರಕ ಕಾಯಿಲೆಗಳು ಬರಲಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ಕಾರ್ಖಾನೆ ಸ್ಥಾಪಿಸಲು ಅನುಮತಿ ನೀಡದಂತೆ ಮನವಿ ಮಾಡಿದ ಹೋರಾಟ ವೇದಿಕೆ, ಈ ಕಾರ್ಖಾನೆಯು ತುಂಗಾಭದ್ರಾ ಅಚ್ಚುಕಟ್ಟು ಪ್ರದೇಶದಿಂದ ೨೦೦ ಮೀಟರ್‌ ಅಂತರದಲ್ಲಿದೆ. ಕಾರ್ಖಾನೆಯಿಂದ ಬಿಡುವ ಕಲುಷಿತ ನೀರಿನಿಂದ ಅಲ್ಲಿನ ಜಲಚರ ಹಾಗೂ ನೀರು ಕುಡಿಯುವ ಪ್ರಾಣಿಗಳಿಗೂ ಅಪಾಯ ಉಂಟಾಗುತ್ತದೆ. ಹಾಗಾಗಿ ನಮಗೆ ಯಾವುದೇ ಕಾರಣಕ್ಕೂ ಸ್ಥಾಪನೆ ಮಾಡುವುದು ಬೇಡ ಎಂದು ಮನವಿ ಮಾಡಲಾಯಿತು. ಗೊಂಡಬಾಳ ಮತ್ತು ಮುದ್ದಾಬಳ್ಳಿ ಬಳಿ ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಬಿಡುವುದಿಲ್ಲ. ಇದರಿಂದ ಜನರಿಗೆ ತೊಂದರೆಯಾಗುವ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು.

ರಾಘವೇಂದ್ರ ಹಿಟ್ನಾಳ ಶಾಸಕ