ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ದಿಢೀರ್ ಭೇಟಿ

KannadaprabhaNewsNetwork |  
Published : Apr 07, 2025, 12:34 AM IST
3ಕೆಎಂಎನ್ ಡಿ27 | Kannada Prabha

ಸಾರಾಂಶ

ಹಾಸ್ಟೆಲ್‌ನಿಂದ ವಿವಿಧ ಕಾಲೇಜುಗಳಿಗೆ ತೆರಳಲು ಸಾರಿಗೆ ಬಸ್ ಸೌಕರ್ಯವಿಲ್ಲದೆ ಬಹಳ ತೊಂದರೆಯಾಗುತ್ತಿದೆ ಎಂದು ಬಾಲಕಿಯರು ಡೀಸಿ ಬಳಿ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಡೀಸಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಸಾರಿಗೆ ಬಸ್‌ಗಳು ನಾಳೆಯಿಂದಲೇ ಹಾಸ್ಟೆಲ್ ಮುಂಭಾಗ ನಿಲುಗಡೆ ಕೊಡಲು ಅಗತ್ಯ ಕ್ರಮವಹಿಸಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದ ಟಿ.ಬಿ.ಬಡಾವಣೆಯ ಬಿಂಡಿಗನವಿಲೆ ರಸ್ತೆಯ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಗುರುವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಡಾ.ಕುಮಾರ ದಿಢೀರ್ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.

ಬೇಡಿಕೆ ಮತ್ತು ಕುಂದುಕೊರತೆಗಳ ಬಗ್ಗೆ ಮಕ್ಕಳೊಂದಿಗೆ ಸಂವಾದ ನಡೆಸಿದ ಬಳಿಕ ಹಾಸ್ಟೆಲ್‌ನ ಕೊಠಡಿಗಳು, ಶೌಚಾಲಯ, ಅಡುಗೆ ಕೋಣೆ ಮತ್ತು ಗ್ರಂಥಾಲಯವನ್ನು ಖುದ್ದು ವೀಕ್ಷಣೆ ಮಾಡಿ ಅಲ್ಲಿನ ಮೂಲ ವ್ಯವಸ್ಥೆ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದರು. ನಂತರ ಹಾಸ್ಟೆಲ್ ಬಾಲಕಿಯರೊಂದಿಗೆ ಕುಳಿತು ಮಧ್ಯಾಹ್ನದ ರಾಗಿ ಮುದ್ದೆ, ಸೊಪ್ಪಿನ ಸಾರು, ಊಟ ಸೇವಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಸರಳತೆ ಮೆರೆದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನು ಕೂಡಲೇ ಒದಗಿಸಿಕೊಡುವ ಜೊತೆಗೆ, ಹಾಸ್ಟೆಲ್‌ನ ಸಾಮಾನ್ಯ ಕಾರಿಡಾರ್‌ನಲ್ಲಿ ಟೇಬಲ್‌ಗಳನ್ನು ಅಳವಡಿಸಿ ಎಲ್ಲಾ ಮಕ್ಕಳು ಕುಳಿತು ಓದಲು ಅನುಕೂಲ ಮಾಡಿಕೊಡಬೇಕೆಂದು ಬಿಸಿಎಂ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಹಾಸ್ಟೆಲ್‌ನಿಂದ ವಿವಿಧ ಕಾಲೇಜುಗಳಿಗೆ ತೆರಳಲು ಸಾರಿಗೆ ಬಸ್ ಸೌಕರ್ಯವಿಲ್ಲದೆ ಬಹಳ ತೊಂದರೆಯಾಗುತ್ತಿದೆ ಎಂದು ಬಾಲಕಿಯರು ಡೀಸಿ ಬಳಿ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಡೀಸಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಸಾರಿಗೆ ಬಸ್‌ಗಳು ನಾಳೆಯಿಂದಲೇ ಹಾಸ್ಟೆಲ್ ಮುಂಭಾಗ ನಿಲುಗಡೆ ಕೊಡಲು ಅಗತ್ಯ ಕ್ರಮವಹಿಸಬೇಕೆಂದು ಸ್ಥಳದಲ್ಲಿದ್ದ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಮಹೇಶ್ ಅವರಿಗೆ ಸೂಚಿಸಿದರು.

ಬಳಿಕ ಕನ್ನಡಪ್ರಭದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಹಾಸ್ಟೆಲ್‌ನಲ್ಲಿ ದೊರಕುತ್ತಿರುವ ಸೌಲಭ್ಯಗಳ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ನಾನು ಗಮನಿಸಿದಂತೆ ಹಾಸ್ಟೆಲ್‌ನ ಕೊಠಡಿಯಲ್ಲಿ ಮಕ್ಕಳು ಓದಲು ಸರಿಯಾದ ಟೇಬಲ್ ವ್ಯವಸ್ಥೆಯಿಲ್ಲ. ಬಿಸಿನೀರಿನ ವ್ಯವಸ್ಥೆ ಇದ್ದರೂ ಕೂಡ ಅದರ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ. ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ನಾನೂ ಕೂಡ ಸ್ವತಃ ಮಕ್ಕಳೊಂದಿಗೆ ಕುಳಿತು ಊಟ ಮಾಡಿದ್ದೇನೆ. ಊಟದ ಗುಣಮಟ್ಟ ಚೆನ್ನಾಗಿದೆ. ಮಕ್ಕಳೂ ಕೂಡ ಊಟ ಮತ್ತು ಇತರೆ ಸೌಲಭ್ಯಗಳ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಪ್ರತಿದಿನವೂ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿದೆ ಎಂದು ಎಲ್ಲಾ ಮಕ್ಕಳು ಹೇಳಿದ್ದಾರೆ ಎಂದರು.

ಈ ವೇಳೆ ತಹಸೀಲ್ದಾರ್ ಜಿ.ಆದರ್ಶ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಸಿದ್ದಲಿಂಗೇಶ್ ಬೇವಿನಮಠ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ತಾಲೂಕು ಹಿಂದುಳಿದ ವರ್ಗಗಳ ಇಲಾಖೆ ಕಲ್ಯಾಣಾಧಿಕಾರಿ ದಾಸಪ್ಪಬೋವಿ, ಹಾಸ್ಟೆಲ್ ವಾರ್ಡನ್ ರಮ್ಯ, ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಮಹೇಶ್, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರಾದ ಕೆ.ಎನ್.ಮಧುಸೂಧನ್, ಗೋವಿಂದರಾಜು ಸೇರಿದಂತೆ ಹಲವರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...