ಚಿಕ್ಕಮಗಳೂರುರೋಗಿಗಳಿಗೆ ಸೂಕ್ತ ರೀತಿಯ ಚಿಕಿತ್ಸೆ ದೊರೆಯಬೇಕು. ನಿಗದಿತ ಅವಧಿಯಲ್ಲಿ ಆರೋಗ್ಯ ಸೇವೆಗಳು ದೊರೆಯುವಂತೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳಿಗೆ ಸೂಚನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ರೋಗಿಗಳಿಗೆ ಸೂಕ್ತ ರೀತಿಯ ಚಿಕಿತ್ಸೆ ದೊರೆಯಬೇಕು. ನಿಗದಿತ ಅವಧಿಯಲ್ಲಿ ಆರೋಗ್ಯ ಸೇವೆಗಳು ದೊರೆಯುವಂತೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸೋಮವಾರ ದಿಢೀರ್ ಭೇಟಿ ನೀಡಿದ ಅವರು, ಹೊರ ರೋಗಿ ವಿಭಾಗ, ತುರ್ತು ಚಿಕಿತ್ಸಾ ಘಟಕ, ರಕ್ತ ಪರೀಕ್ಷಾ ವಿಭಾಗ, ಹೆರಿಗೆ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ನೇರವಾಗಿ ರೋಗಿಗಳನ್ನು ಮಾತನಾಡಿಸಿದ ಜಿಲ್ಲಾಧಿಕಾರಿ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದರು. ತುರ್ತು ಚಿಕಿತ್ಸಾ ಘಟಕದಲ್ಲಿ 12 ಗಂಟೆಯಿಂದ ಏಕೆ ರೋಗಿಯನ್ನು ಚಿಕಿತ್ಸೆ ನೀಡಲಾಗುತ್ತದೆ. ವಾರ್ಡ್‌ಗೆ ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ, ಆಸ್ಪತ್ರೆ ಒಳಭಾಗದ ರಸ್ತೆ, ನೀರಿ ಟ್ಯಾಂಕ್ ಅಭಿವೃದ್ಧಿಗೆ ಕ್ರಮ ವಹಿಸುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿ ಸಾರ್ವಜನಿಕರಿಗೆ ಸುಲಲಿತವಾಗಿ ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹೊಸದಾಗಿ ನೇಮಕಗೊಂಡಿರುವ ಡೀನ್ ಹಾಗೂ ಸರ್ಜನ್ ಅವರೊಂದಿಗೆ ಚರ್ಚಿಸಲಾಗಿದೆ. ನೇರ ಸಂದರ್ಶನ ಮತ್ತು ಗುತ್ತಿಗೆ ಆಧಾರದ ಮೇಲೆ ವೈದ್ಯರು ಹಾಗೂ ಸಿಬ್ಬಂದಿ ನೇಮಕ ಮಾಡಲು ನಿರ್ಧರಿಸಲಾಗಿದೆ. ಹೊರರೋಗಿಗಳ ವಿಭಾಗದಲ್ಲಿ ನೋಂದಣಿ, ರಕ್ತ ತಪಾಸಣೆ ಹಾಗೂ ವೈದ್ಯರ ಭೇಟಿಗೆ ತೆಗೆದುಕೊಳ್ಳುವ ಸಮಯ ಕಡಿತಗೊಳಿಸಿ ಶೀಘ್ರ ಸೇವೆ ಸಿಗುವಂತೆ ಸೂಚಿಸಲಾಗಿದೆ. ಪ್ರಸ್ತುತ ವೈರಲ್ ಫೀವರ್ ಹಾಗೂ ಹೆಚ್ ೧ಎನ್೧ ಪ್ರಕರಣಗಳು ಹೆಚ್ಚುತ್ತಿರುವುದರಿಂದ ತ್ವರಿತ ಚಿಕಿತ್ಸೆಗೆ ಕ್ರಮ ವಹಿಸಲಾಗುವುದು. ರೋಗಿಗಳಿಗೆ ಆಸ್ಪತ್ರೆ ಪ್ರವೇಶ ಮತ್ತು ನಿರ್ಗಮನದ ದಾರಿಗಳ ಗೊಂದಲ ನಿವಾರಿಸಲು ಆಸ್ಪತ್ರೆಯ ವಿನ್ಯಾಸಕ್ಕೆ ತಕ್ಕಂತೆ ಸುಧಾರಣೆ ತರಲಾಗುವುದು.ತುರ್ತು ವಿಭಾಗದಲ್ಲಿ ಪ್ರಸ್ತುತ ೨೪ ಬೆಡ್‌ಗಳಿದ್ದು, ಮುಂಬರುವ ದಿನಗಳಲ್ಲಿ ಮೆಡಿಕಲ್ ಕಾಲೇಜಿನ ಎಂಸಿಎಚ್ ಹಾಗೂ ಸೂಪರ್ ಸ್ಪೆಷಾಲಿಟಿ ವಿಭಾಗಗಳು ಉದ್ಘಾಟನೆಯಾದ ನಂತರ ಜಿಲ್ಲಾ ಆಸ್ಪತ್ರೆ ಮೇಲಿನ ಒತ್ತಡ ಕಡಿಮೆಯಾಗಲಿದೆ. ತಾಲೂಕು ಆಸ್ಪತ್ರೆಗಳಿಂದ ಅನಗತ್ಯವಾಗಿ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡುವುದನ್ನು ತಡೆಯಲಾಗುವುದು. ಆಸ್ಪತ್ರೆ ಆವರಣದಲ್ಲಿ ಹಾಳಾದ ರಸ್ತೆಗಳ ದುರಸ್ತಿ ಹಾಗೂ ನೀರಿನ ಸಮಸ್ಯೆಯನ್ನು ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಲಾಗುವುದು. ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕೆ ಕೆಎಸ್‌ಆರ್‌ಟಿಸಿ ಅಧಿಕಾರಿ ಗಳೊಂದಿಗೆ ಮಾತುಕತೆ ನಡೆಸಿ ಬಸ್ ಸೌಕರ್ಯ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಸೂಚನೆ:
ಆಸ್ಪತ್ರೆಯಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆ ಹಾಗೂ ಕುಂದುಕೊರತೆಗಳ ಕುರಿತು ಮಾಹಿತಿ ನೀಡಿದರು. ಆಸ್ಪತ್ರೆಯಿಂದ ರೋಗಿಗಳನ್ನು ಅನಗತ್ಯವಾಗಿ ಬೇರೆ ಆಸ್ಪತ್ರೆಗಳಿಗೆ ರೆಫರ್ ಮಾಡುತ್ತಿರುವ ದೂರು ಗಳಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು. ಸರ್ಕಾರಿ ವೈದ್ಯರು ಖಾಸಗಿಯಾಗಿ ಪ್ರಾಕ್ಟೀಸ್ ಮಾಡುತ್ತಿರುವ ಕುರಿತು ಆಡಳಿತದಿಂದ ಈಗಾಗಲೇ ತನಿಖೆ ಪ್ರಾರಂಭವಾಗಿದೆ ಎಂದು ತಿಳಿಸಿದರು.ಮೆಡಿಕಲ್ ಕಾಲೇಜಿನಲ್ಲಿ ಸಿಬ್ಬಂದಿಗೆ ಪಿಎಫ್ ಪಾವತಿಯಾಗದಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸಂಬಂಧ ಪಟ್ಟ ಏಜೆನ್ಸಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ತನಿಖಾ ಸಮಿತಿ ರಚಿಸಲಾಗಿದೆ. ವೈದ್ಯರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎಂಬ ದೂರುಗಳಿಗೆ ಪ್ರತಿಕ್ರಿಯಿಸಿ, ತಮ್ಮ ಭೇಟಿಯ ವೇಳೆ ವೈದ್ಯರು ಉಪಸ್ಥಿತರಿದ್ದರು ಎಂದರಲ್ಲದೆ, ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ವೈದ್ಯರ ಹಾಜರಾತಿ ಬಗ್ಗೆ ಪರಾಮರ್ಶೆ ನಡೆಸಲಾಗುವುದು ಎಂದು ಹೇಳಿದರು.ಆಸ್ಪತ್ರೆಗೆ ಪ್ರತಿದಿನ ಸಾವಿರದಿಂದ ೧,೨೦೦ಕ್ಕೂ ಹೆಚ್ಚು ರೋಗಿಗಳು ಆಗಮಿಸುತ್ತಿದ್ದು, ವಿಶೇಷವಾಗಿ ಸೋಮವಾರದಂದು ಜನಸಂದಣಿ ಹೆಚ್ಚಿರುತ್ತದೆ. ಸಾರ್ವಜನಿಕರು ಮೊಬೈಲ್ ಮೂಲಕವೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯವಿದ್ದು, ಇದರ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಹಳೆಯ ಚೀಟಿ ಗಳನ್ನು ತಂದರೂ ಪರಿಶೀಲಿಸಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಲ್ಯಾಬ್‌ನಲ್ಲಿ ಸ್ವಯಂಚಾಲಿತ ಯಂತ್ರಗಳು ಲಭ್ಯವಿದ್ದು, ಸಾರ್ವಜನಿಕರಿಗೆ ಶೀಘ್ರ ಸೇವೆ ತಲುಪಿಸಲು ಮತ್ತಷ್ಟು ಸುಧಾರಣೆ ತರುವ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.ಮೆಡಿಕಲ್ ಕಾಲೇಜಿನ ಡೀನ್ ಡಾ.ಶ್ರೀನಿವಾಸ್ ದೇಶಪಾಂಡೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ಎಚ್.ಎಲ್.ಮಂಜುನಾಥ್, ಜಿಲ್ಲಾ ಸರ್ಜನ್ ಡಾ.ದೇವರಾಜ್, ಡಾ.ಚಂದ್ರಶೇಖರ್ ಸಾಲಿಮಠ್, ಡಾ.ಲೋಹಿತ್ ಮುಂತಾದವರಿದ್ದರು. -- ಬಾಕ್ಸ್--
ಬಸ್ ವ್ಯವಸ್ಥೆಗೆ ವೈದ್ಯಕೀಯ ವಿದ್ಯಾರ್ಥಿಗಳ ಮನವಿ
ಜಿಲ್ಲಾಸ್ಪತ್ರೆಗೆ ಆಗಮಿಸುವ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಕಾಲೇಜಿ ಮತ್ತು ಆಸ್ಪತ್ರೆಗೆ ಓಡಾಟಕ್ಕೆ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ, ಹೆಚ್ಚಿನ ಬಸ್ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರಿಗೆ ಮನವಿ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.