ಅಜ್ಜಂಪುರ: ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಮೊದಲು ಅಜ್ಜಂಪುರ ತಾಲೂಕಿನ ರೈತರಿಗೆ ನೀರು ಹರಿಸಿ, ಬಳಿಕ ಚಿತ್ರದುರ್ಗ ಜಿಲ್ಲೆಗೆ ನೀರು ಬಿಡಬೇಕು ಎಂದು ಆಗ್ರಹಿಸಿ ನೂರಾರು ರೈತರು ಭದ್ರಾ ನದಿ ಯೋಜನೆ ಕಾಲುವೆ ಮೇಲೆ ಕುಳಿತು ಪ್ರತಿಭಟಿಸಿದರು.
ಅಜ್ಜಂಪುರ ಹಾಗೂ ಶಿವನಿ ಹೋಬಳಿಗಳ ಸುಮಾರು 60- 70 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಕೃಷಿ ಚಟುವಟಿಕೆಗೆ ಅಗತ್ಯ ನೀರು ದೊರೆಯದೆ ರೈತರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ 8 ರಿಂದ 10 ಗ್ರಾಮಗಳ ಸಾವಿರಾರು ರೈತರು ಭದ್ರಾ ನದಿ ಕಾಲುವೆ ಬಳಿ ಜಮಾಯಿಸಿ ಹೋರಾಟ ನಡೆಸಿದರು.
ಸ್ಥಳೀಯ ರೈತರ ಅಗತ್ಯ ಕಡೆಗಣಿಸಿ ಹೊರ ಜಿಲ್ಲೆಗೆ ನೀರು ಹರಿಸುವ ಕ್ರಮ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಮೊದಲು ಸ್ಥಳೀಯ ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಸಿ, ಬಳಿಕ ಹೆಚ್ಚುವರಿ ನೀರನ್ನು ಇತರ ಪ್ರದೇಶಗಳಿಗೆ ಹರಿಸಬೇಕು ಎಂದು ಆಗ್ರಹಿಸಿದರು.ಭದ್ರಾ ಯೋಜನೆ ನೀರು ಹಂಚಿಕೆಯಲ್ಲಿ ಸ್ಥಳೀಯ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು. ಕೂಡಲೇ ಕಾಲುವೆಗೆ ನೀರು ಹರಿಸಿ ರೈತರ ಸಮಸ್ಯೆ ಬಗೆಹರಿಸಲು ಒತ್ತಾಯಿಸಿದರು.