ಎಸ್ಸೆಸ್ಸೆಲ್ಸಿ ಪರೀಕ್ಷೆ-3 ಅಚ್ಚುಕಟ್ಟಾಗಿ ನಡೆಸಲು ಜಿಲ್ಲಾಧಿಕಾರಿ ಸೂಚನೆ

KannadaprabhaNewsNetwork |  
Published : Aug 02, 2024, 12:51 AM IST
1ಎಚ್‌ಪಿಟಿ1- ಹೊಸಪೇಟೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. | Kannada Prabha

ಸಾರಾಂಶ

ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಅಂತರದ ಪ್ರದೇಶದಲ್ಲಿ ಯಾವುದೇ ರೀತಿಯ ಅಕ್ರಮ, ಅವ್ಯವಹಾರ ನಡೆಯದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಹೊಸಪೇಟೆ: ಪರೀಕ್ಷಾ ಅಕ್ರಮಕ್ಕೆ ಅವಕಾಶವಿಲ್ಲದಂತೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ-3 ಅನ್ನು ಪಾರದರ್ಶಕವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು.

ಜಿಲ್ಲೆಯಲ್ಲಿ ಆ.2ರಿಂದ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2024ರ ನಿಮಿತ್ತ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪ್ರೌಢಶಾಲಾ ಮುಖ್ಯ ಗುರುಗಳು ಮತ್ತು ಶಿಕ್ಷಕರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಮಂಡಳಿಯ ಜಾಲತಾಣದಿಂದ ಪಡೆದುಕೊಂಡು ತಮ್ಮ ಶಾಲಾ ಸೂಚನಾ ಫಲಕದಲ್ಲಿ ಪ್ರಕಟಿಸಲು ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಅಕ್ರಮಕ್ಕೆ ತಡೆಗೆ ನಿಷೇಧಾಜ್ಞೆ ಜಾರಿ:

ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಅಂತರದ ಪ್ರದೇಶದಲ್ಲಿ ಯಾವುದೇ ರೀತಿಯ ಅಕ್ರಮ, ಅವ್ಯವಹಾರ ನಡೆಯದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೊಠಡಿ ಮೇಲ್ವಿಚಾರಕರು, ಪ್ರೌಢಶಾಲಾ ಶಿಕ್ಷಕರು, ವೀಕ್ಷಕರು ಹಾಗೂ ಇತರ ಪರೀಕ್ಷಾ ನಿಯೋಜಿತ ಸಿಬ್ಬಂದಿ ಪರೀಕ್ಷಾ ದಿನದಂದು ನಿಗದಿತ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಕಾಲಮಿತಿಯಲ್ಲಿ ನಿಯಮಾನುಸಾರ ಎಲ್ಲ ವ್ಯವಸ್ಥೆ ಮಾಡಿಕೊಂಡು ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು. ಈಗಾಗಲೇ ನೀಡಿರುವ ನಾಮಿನಲ್ ರೋಲ್‌ನಲ್ಲಿ ಇರುವಂತೆ ಪರೀಕ್ಷಾ ಕೇಂದ್ರದಲ್ಲಿ ಆಸನ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಬೇಕು. ಉಪ ನಿರ್ದೇಶಕರ ಕಾರ್ಯಾಲಯದಲ್ಲಿ ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆಯ ನೇರ ಪ್ರಸಾರ ಇರುವುದರಿಂದ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎ. ಹನುಮಕ್ಕ ಮಾತನಾಡಿ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ನಡೆಸುತ್ತಿರುವ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಜಿಲ್ಲೆಯಲ್ಲಿ 12 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು 3,165 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಆ. 2ರಿಂದ ಆ. 9ರ ವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.

ಹೊಸಪೇಟೆ ತಾಲೂಕಿನಲ್ಲಿ 1045, ಕೂಡ್ಲಿಗಿ ತಾಲೂಕಿನಲ್ಲಿ 671, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 189, ಹರಪನಹಳ್ಳಿ ತಾಲೂಕಿನಲ್ಲಿ 746, ಹೂವಿನಹಡಗಲಿ ತಾಲೂಕಿನಲ್ಲಿ 514 ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 3,165 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ನೋಡಲ್ ಅಧಿಕಾರಿಗಳಾದ ಎಚ್.ಎಂ. ಹುಲಿಬಂಡಿ ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಮಾರ್ಗಾಧಿಕಾರಿಗಳು, ಪರೀಕ್ಷಾ ನಿಯೋಜಿತ ಸಿಬ್ಬಂದಿ ಇದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?