ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚನೆ

KannadaprabhaNewsNetwork | Published : Dec 25, 2024 12:47 AM

ಸಾರಾಂಶ

ಜ. 9ರಂದು ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿ, ಜಿಲ್ಲೆಯ ಯುವ ಜನತೆಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉತ್ತಮ ಉದ್ಯೋಗ ದೊರಕಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು.

ಕಾರವಾರ: ಜಿಲ್ಲೆಯ ಯುವಜನತೆಗೆ ಅಗತ್ಯವಿರುವ ತಾಂತ್ರಿಕ ಮತ್ತು ಕೌಶಲ್ಯ ತರಬೇತಿಗಳನ್ನು ನೀಡಿ ಉದ್ಯೋಗ ಅರಸಿ ಬೇರೆಡೆ ಹೋಗದಂತೆ ಜಿಲ್ಲೆಯಲ್ಲಿಯೇ ಉತ್ತಮ ವೇತನ ದೊರೆಯುವ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಕೌಶಲ್ಯಾಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಐಟಿಐ ಕಾಲೇಜುಗಳಲ್ಲಿ ಪ್ರಸ್ತುತ ಉದ್ಯೋಗ ವಲಯಗಳಲ್ಲಿ ಬೇಡಿಕೆ ಇರುವ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರ ಜತೆಗೆ ಜಿಲ್ಲೆಯಲ್ಲಿರುವ ಸೀಬರ್ಡ್ ಮತ್ತು ಇತರೆ ಕಂಪನಿಗಳಲ್ಲಿ ಅಗತ್ಯ ಬೇಡಿಕೆ ಇರುವ ಉದ್ಯೋಗಗಳ ಕುರಿತಂತೆ ಸಂಬಂಧಪಟ್ಟ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರ ಬೇಡಿಕೆಯನ್ನು ಪಡೆದು ಅದಕ್ಕೆ ಸೂಕ್ತವಾದ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಜಿಲ್ಲೆಯಲ್ಲಿ ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಇದುವರೆಗೆ ನಡೆದಿರುವ ಉದ್ಯೋಗ ಮೇಳದಲ್ಲಿ ಉದ್ಯೋಗ ಪಡೆದಿರುವ ಯುವಕರ ವಿವರಗಳನ್ನು ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿ, ಮೇಳದಲ್ಲಿ ಉದ್ಯೋಗ ಪಡೆದಿರುವ ಯುವಕರ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಪರಿಶೀಲಿಸಬೇಕು. ಜ. 9ರಂದು ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿ, ಜಿಲ್ಲೆಯ ಯುವ ಜನತೆಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉತ್ತಮ ಉದ್ಯೋಗ ದೊರಕಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಯುವನಿಧಿ ಯೋಜನೆಯಡಿ ನೋಂದಾಯಿಸಿರುವ ಎಲ್ಲ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ದೊರೆಯುವಂತೆ ನೋಡಿಕೊಳ್ಳಬೇಕು. ಯೋಜನೆಗೆ ಅರ್ಜಿ ಸಲ್ಲಿಸಿ, ಪರಿಶೀಲನಾ ಹಂತದಲ್ಲಿರುವ ಅರ್ಜಿಗಳನ್ನು 10 ದಿನದಲ್ಲಿ ಪೂರ್ಣಗೊಳಿಸಿ ಅರ್ಹ ಎಲ್ಲರಿಗೂ ಯೋಜನೆಯ ಪ್ರಯೋಜನ ದೊರೆಕಿಸಬೇಕು.

ಯೋಜನೆಯ ನೆರವು ಪಡೆಯಲು ತಾಂತ್ರಿಕ ತೊಂದರೆಯಿರುವ ಅಭ್ಯರ್ಥಿಗಳ ಬಗ್ಗೆ ಪರಿಶೀಲಿಸಿ ಅವುಗಳನ್ನು ಬಗೆಹರಿಸಬೇಕು. ಅಂಕಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಲು ಸಮಸ್ಯೆಯಿರುವ ಕಾಲೇಜು ಮತ್ತು ವಿವಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಸೂಚಿಸಿದರು.

ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಿ.ಟಿ. ನಾಯ್ಕ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಂತ್ ಮುಂತಾದವರು ಇದ್ದರು.ನೌಕಾನೆಲೆಗೆ ವಿದ್ಯಾರ್ಥಿಗಳ ಭೇಟಿ

ಕಾರವಾರ: ನೌಕಾ ದಿನದ ಆಚರಣೆಯ ಅಂಗವಾಗಿ ಭಾರತೀಯ ನೌಕಾಪಡೆಯಿಂದ ತಾಲೂಕಿನ ಅರಗಾ ಕದಂಬ ನೌಕಾ ನೆಲೆಯಲ್ಲಿ ಯುದ್ಧ ನೌಕೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ವಿವಿಧ ಶಾಲಾ ಮಕ್ಕಳಿಗಾಗಿ ಅವಕಾಶ ನೀಡಲಾಗಿತ್ತು.

ಕರ್ನಾಟಕ ಮತ್ತು ಆಂಧ್ರಪ್ರದೇಶದ ೧೩ ಶಾಲೆಗಳ ಒಟ್ಟು ೧,೦೦೦ ವಿದ್ಯಾರ್ಥಿಗಳು ಐಎನ್‌ಎಸ್ ವಿಕ್ರಾಂತ್, ಐಎನ್‌ಎಸ್ ಆದಿತ್ಯ, ಐಎನ್‌ಎಸ್ ವಿಶಾಖಪಟ್ಟಣಂ ಮತ್ತು ಐಎನ್‌ಎಸ್ ಸುವರ್ಣ ಸೇರಿದಂತೆ ವಿವಿಧ ಯುದ್ಧ ನೌಕೆಗಳಿಗೆ ಭೇಟಿ ನೀಡಿ ರಾಷ್ಟ್ರೀಯ ಕಡಲ ಭದ್ರತೆಯಲ್ಲಿ ಭಾರತೀಯ ನೌಕಾಪಡೆಯ ಪಾತ್ರ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅದರ ಕೊಡುಗೆಗಳ ಬಗ್ಗೆ ತಿಳಿದುಕೊಂಡರು.

Share this article