ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಂಡುಬರುವ ವಿವಿಧ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧದಲ್ಲಿ ಗುರುವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಾಷ್ಟ್ರೀಯ ಹೆದ್ದಾರಿಯ ವಿವಿಧೆಡೆ ಅಪಘಾತ ತಡೆಗಟ್ಟಲು ರಸ್ತೆ ಅಗಲೀಕರಣ, ಬೈಪಾಸ್, ಫ್ಲೈ ಓವರ್ ಸೇರಿದಂತೆ ಒಟ್ಟು 24 ವಿವಿಧ ಕಾಮಗಾರಿಗಳನ್ನು ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಗುರುತಿಸಲಾಗಿತ್ತು. ಆದರೆ ಕೆಲವು ಪ್ರಮುಖ ಸ್ಥಳಗಳಲ್ಲಿ ಸಂಚಾರ ಕಾರಣ ಮುಂದೊಡ್ಡಿ ಕಾಮಗಾರಿಗಳನ್ನು ಇನ್ನೂ ಕೈಗೊತ್ತಿಕೊಳ್ಳದಿರುವುದು ಕಂಡುಬಂದಿದೆ. ಇದರಿಂದ ಸಂಚಾರ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ. ಸಂಚಾರ ಪೊಲೀಸ್ ಸಹಕಾರ ಪಡೆದು ಈ ಎಲ್ಲ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಕೂಳೂರು- ಬೈಕಂಪಾಡಿ 6 ಲೇನ್: ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅಬ್ದುಲ್ಲಾ ಮಾತನಾಡಿ, ಕೂಳೂರು ಹೊಸ ಸೇತುವೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಶೀಘ್ರದಲ್ಲೇ ಸೇತುವೆಯ ಒಂದು ಭಾಗ ಪೂರ್ಣಗೊಳ್ಳಲಿದೆ. ಕೂಳೂರಿನಿಂದ ಬೈಕಂಪಾಡಿವರೆಗೆ ಒಟ್ಟು 6 ಲೇನ್‍ಗಳ ಹೆದ್ದಾರಿ ನಿರ್ಮಾಣವಾಗಲಿದೆ. ಈ ರಸ್ತೆಯ ಎರಡೂ ಕಡೆಗಳಲ್ಲಿ ಪ್ರತ್ಯೇಕವಾಗಿ ಸರ್ವಿಸ್ ರಸ್ತೆಯೂ ಇರಲಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕೂಳೂರು ನಂತರo ಭಾಗದಲ್ಲಿ ಬೀದಿದೀಪ ಅಳವಡಿಸಲು ಮಹಾನಗರ ಪಾಲಿಕೆ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಜಿಲ್ಲೆಯಲ್ಲಿ 2025ರ ಅಕ್ಟೋಬರ್ 30ರವರೆಗೆ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ 720 ಪ್ರಕರಣಗಳನ್ನು ದಾಖಲಿಸಿ, 17.39 ಲಕ್ಷ ರು. ದಂಡ ಹಾಗೂ ಟಿಂಟೆಡ್ ಗ್ಲಾಸ್ ಅಳವಡಿಸಿದ ವಾಹನಗಳ ಮೇಲೆ 8066 ಪ್ರಕರಣ ದಾಖಲಿಸಿ 38.39 ಲಕ್ಷ ರು. ದಂಡ ವಿಧಿಸಲಾಗಿದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.ವಿವಿಧೆಡೆ ಟ್ರಾಫಿಕ್ ಸಿಗ್ನಲ್: ಕಲ್ಲಾಪು, ಜಪ್ಪಿನಮೊಗರು, ಮಹಾಕಾಳಿಪಡ್ಪು ಜಂಕ್ಷನ್‍ಗಳಲ್ಲಿ ಸಿಗ್ನಲ್‍ಗಳನ್ನು ಅಳವಡಿಸುವ ಬಗ್ಗೆ ಟ್ರಾಫಿಕ್ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಯಿತು.ನವ ಮಂಗಳೂರು ವ್ಯಾಪ್ತಿಯಲ್ಲಿ ಟ್ರಕ್, ಲಾರಿಗಳ ಪಾರ್ಕಿಂಗ್‍ಗೆ ತಣ್ಣೀರುಬಾವಿ ಮತ್ತು ಬೈಕಂಪಾಡಿಯಲ್ಲಿ ಎನ್.ಎಂ.ಪಿ.ಎ. ವತಿಯಿಂದ ಟ್ರಕ್ ಟರ್ಮಿನಲ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಭೆಗೆ ತಿಳಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ಅರುಣ್, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಮಹಮ್ಮದ್ ನಜೀರ್, ಡಿಸಿಪಿ ರವಿಶಂಕರ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ನಾಯ್ಕ್ ಮತ್ತಿತರರಿದ್ದರು.