ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಾಕಿ ಉಳಿದ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಮುಗಿಸಲು, ಬಜೆಟ್‌ನಲ್ಲಿ ಮಂಡಿಸಿದ ಯೋಜನೆ ಜಾರಿಗೆ ಆದ್ಯತೆ ನೀಡುವಂತೆ ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದ್ದಾರೆ.ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಹಾನಗರ ಪಾಲಿಕೆ ಕಚೇರಿಗೆ ತೆರಳಿ ಪರಿಶೀಲನೆ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಮಂಗಳೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ಮಹಾಕಾಳಿಪಡ್ಪುವಿನಲ್ಲಿ ವಸತಿ ಸಂಕೀರ್ಣ ನಿರ್ಮಾಣವಾಗುತ್ತಿದ್ದು, 32 ಮನೆಗಳಲ್ಲಿ 9 ಮನೆಗಳು ಅಂತಿಮ ಹಂತದಲ್ಲಿದೆ. ಎರಡನೇ ಹಂತದಲ್ಲಿ ಮತ್ತೆ 32 ಮನೆಗಳನ್ನು ನಿರ್ಮಿಸಲಾಗುವುದು ಎಂದರು.
ಮಂಗಳೂರು ನಗರದಲ್ಲಿ 60 ಸಾವಿರ ಎಲ್‌ಇಡಿ ದೀಪ ಅಳವಡಿಕೆಗೆ ಪಿಪಿಪಿ ಮಾದರಿಯಲ್ಲಿ ಕ್ರಮ ವಹಿಸಲಾಗಿದ್ದು, ಇದರಲ್ಲಿ 20 ಸಾವಿರ ಅಳವಡಿಕೆ ಮಾಡಲಾಗಿದೆ. ಇನ್ನುಳಿದ 40 ಸಾವಿರ ಎಲ್‌ಇಡಿ ತ್ವರಿತಗತಿಯಲ್ಲಿ ಮುಗಿಸಲು ನಿರ್ದೇಶನ ನೀಡಲಾಗಿದೆ ಎಂದರು.
ಮಂಗಳೂರು ಸ್ವಚ್ಛ ನಗರವಾಗಿದ್ದು, ಇದರ ಸೌಂದರ್ಯಕ್ಕೆ ಧಕ್ಕೆಯಾಗಬಾರದು. ನಗರದ ಬ್ಲ್ಯಾಕ್ ಸ್ಪಾಟ್ ಮತ್ತು ಸ್ವಚ್ಛತೆಯ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದರು.ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮತ್ತಿತರ ಅಧಿಕಾರಿಗಳು ಇದ್ದರು.