ಅಧಿಕಾರಿಗಳಿಗೆ ತಾಕೀತು । ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಸ್ತೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಚಾಲನೆಗೆ ಸೂಕ್ತವಾಗುವಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಹೆದ್ದಾರಿ, ರಸ್ತೆ ನಿರ್ಮಾಣ ಮಾಡುವ ಇಲಾಖೆಗಳು ತೆಗೆದುಕೊಳ್ಳಬೇಕಿದೆ. ಕೂಡು ರಸ್ತೆಗಳು, ಜಂಕ್ಷನ್ ಜನನಿಬಿಡ ಸ್ಥಳಗಳು, ಗ್ರಾಮಗಳು, ಇನ್ನಿತರ ಕಡೆ ಸುಗಮವಾಗಿ ವಾಹನ ಚಾಲನೆ ಮಾಡಲು ಅವಶ್ಯವಿರುವ ಎಲ್ಲ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಹೈಮಾಸ್ಟ್ ದೀಪ ಅಳವಡಿಕೆ, ಸಂದೇಶ ನೀಡುವ ಫಲಕಗಳನ್ನು ಹಾಕಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ರಸ್ತೆ ಸುರಕ್ಷತೆಗೆ ಪೊಲೀಸ್ ಇಲಾಖೆ, ಇನ್ನಿತರ ಇಲಾಖೆಗಳ ನೆರವು ಮಾರ್ಗದರ್ಶನ ಪಡೆದು ವಾಹನಗಳ ಸುರಕ್ಷಿತ ಚಾಲನೆಗೆ ಅನುವು ಮಾಡಿಕೊಡಬೇಕು. ಬಾಕಿ ಇರುವ ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಅಪಘಾತಗಳನ್ನು ತಪ್ಪಿಸಲು ವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಬೇಕು. ಸಂಚಾರ ನಿಯಮಗಳ ಅನುಸಾರ ರಸ್ತೆ, ಹೆದ್ದಾರಿಗಳಲ್ಲಿ ವಾಹನ ಸವಾರರಿಗೆ ಚಾಲಕರಿಗೆ ಮಾರ್ಗದರ್ಶನ ಮಾಡುವ ಫಲಕಗಳನ್ನು ಅಳವಡಿಸಬೇಕು ಎಂದರು.
ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ವೇಗಮಿತಿ ಅನುಸರಿಸಬೇಕು. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದರು.
ಎಸ್ಪಿ ಡಾ.ಬಿ.ಟಿ.ಕವಿತಾ ಮಾತನಾಡಿ, ಹೆದ್ದಾರಿ, ರಸ್ತೆಗಳಲ್ಲಿ ಸುಗಮವಾಗಿ ವಾಹನ ಚಾಲನೆಗೆ ಅನುಕೂಲವಾಗುವ ವ್ಯವಸ್ಥೆಗಳನ್ನು ರಸ್ತೆ, ಹೆದ್ದಾರಿ ನಿರ್ಮಾಣ ಮಾಡುವ ಪ್ರಾಧಿಕಾರ, ಇಲಾಖೆಗಳು ಕಲ್ಪಿಸಬೇಕು. ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮಗಳ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಹೇಳಿದರು.
ಜಾಗೃತಿಗೆ ವಿಶೇಷ ಆಂದೋಲನಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ವಿಶೇಷ ಆಂದೋಲನವನ್ನು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುವುದು. ನಗರ, ಪಟ್ಟಣ ಹಾಗೂ ತಾಲೂಕುಗಳಲ್ಲಿಯೂ ಎಲ್ಲರ ಸಹಕಾರ ಪಡೆದು ಅರಿವು ಮೂಡಿಸುವ ಕಾರ್ಯಕ್ಕೆ ಅಧಿಕಾರಿಗಳು ರೂಪುರೇಷೆ ತಯಾರಿಸಿ ಅನುಷ್ಠಾನಗೊಳಿಸಬೇಕು. ರಸ್ತೆ ಸುರಕ್ಷತೆ ಕುರಿತು ಶಾಲಾ ಕಾಲೇಜು ಹಂತದಲ್ಲಿ ತಿಳಿವಳಿಕೆ ನೀಡುವ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಏರ್ಪಾಡು ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚಿಸಿದರು.