ಹೋರಾಟದಿಂದಷ್ಟೆ ಪ್ರಕೃತಿ ಮೇಲಿನ ದಬ್ಬಾಳಿಕೆಗೆ ತಡೆ: ಶ್ರೀಧರ್ ಕಲ್ಲಹಳ್ಳ

KannadaprabhaNewsNetwork | Published : Jul 24, 2024 12:24 AM

ಸಾರಾಂಶ

ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಸಹ್ಯಾದ್ರಿ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜನರ ಸಹಭಾಗಿತ್ವ ಹೋರಾಟದಿಂದ ಮಾತ್ರ ಪ್ರಕೃತಿ ಮೇಲಾಗುವ ದಬ್ಬಾಳಿಕೆಯನ್ನು ತಡೆಯಬಹುದು. ವಿದ್ಯಾರ್ಥಿಗಳು ಸಹ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಪರಿಸರ ಚಿಂತಕ ತೀರ್ಥಹಳ್ಳಿಯ ಶ್ರೀಧರ್ ಕಲ್ಲಹಳ್ಳ ಕರೆ ನೀಡಿದರು.

ಇಲ್ಲಿನ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕುವೆಂಪು ವಿವಿ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ, ರೋಟರಿ ಕ್ಲಬ್ ಮಲೆನಾಡು ಸಹಯೋಗದಲ್ಲಿ ಸಹ್ಯಾದ್ರಿ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಇಂದು ಲೂಟಿಯಾಗುತ್ತದೆ. ನಿರಂತರವಾದ ದಬ್ಬಾಳಿಕೆಯಿಂದಾಗಿ ಪರಿಸರವೇ ನಾಶವಾಗಿ ಭೂಮಿ ತನ್ನ ಫಲವತತ್ತೆಯನ್ನೇ ಕಳೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಕೃಷಿ ಭೂಮಿಯೇ ಇಲ್ಲವಾಗಿ ಆಹಾರದ ಸಮಸ್ಯೆ ತಲೆದೋರಬಹುದು ಮತ್ತು ಅದಕ್ಕಾಗಿ ಯುದ್ಧವೇ ನಡೆದರೂ ಆಶ್ಚರ್ಯವಿಲ್ಲ. ನಾವೆಲ್ಲರೂ ಎಚ್ಚೆತ್ತುಕೊಳ್ಳದಿದ್ದರೆ, ಇಡೀ ಭೂಮಿಯೇ ವಿನಾಶದತ್ತ ಸಾಗುತ್ತದೆ ಎಂದರು.

ಶಿವಮೊಗ್ಗ ಜಿಲ್ಲೆಯನ್ನೇ ಗಮನಿಸುವುದಾದರೆ ಎಂಪಿಎಂ ಕಾರ್ಖಾನೆ ಮುಚ್ಚಿದರೂ ಕೂಡ ಸುಮಾರು ಒಂದು ಲಕ್ಷ ಹೆಕ್ಟೇರ್ ಅರಣ್ಯ ಭೂಮಿಯನ್ನು ಮತ್ತೆ ಎಂಪಿಎಂಗೆ ಲೀಜ್‍ಗೆ ಕೊಡುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಅಲ್ಲಿ ಅಕೇಷಿಯಾ ಮತ್ತು ನೀಲಗಿರಿಯಿಂದಾಗಿ ಭೂಮಿಯ ಫಲವತ್ತತೆ ಕೊಚ್ಚಿ ಹೋಗಿದೆ. ಇಡೀ ಅರಣ್ಯ ವನ್ನು ಬೆಂಕಿ ಹಚ್ಚಿ ಬೋಲ್ಡೋಜರ್ ಹೊಡೆದು ನಾಶ ಮಾಡಲಾಗಿದೆ. ಶೇ.10ರಷ್ಟು ಅರಣ್ಯವನ್ನು ಉಳಿಸಬೇಕು ಎಂಬ ನಿಯಮವಿದ್ದರೂ ಕೂಡ ಕಾರ್ಖಾನೆಯವರು ಮಾಡಲಿಲ್ಲ. ಈಗ ಮತ್ತೆ ಲೀಜ್‍ಗೆ ಕೊಡಲು ಹೊರಟಿದ್ದಾರೆ. ಇದರ ವಿರುದ್ಧ ವಿದ್ಯಾರ್ಥಿಗಳು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಭಟಿಸಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಪ್ರಕಾಶ್ ಮರ್ಗನಳ್ಳಿ, ಇಡೀ ಜಗತ್ತು ತಲ್ಲಣಗೊಂಡಿದೆ. ತಾಪ ಮಾನ ಏರಿಕೆಯಾಗುತ್ತಿದೆ. ಮತ್ತೊಂದು ಕಡೆ ಅಭಿವೃದ್ಧಿ ನಿಸರ್ಗವನ್ನು ಬಲಿಪಡೆಯುತ್ತಿದೆ. ಸಾಮಾಜಿಕ ವಿಕೃತಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಪರಿಸರದ ಉಳಿವು ಎಲ್ಲರ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಅವಿನಾಶ್‌ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪರಿಸರ ಕುರಿತ ಕಿರುಚಿತ್ರ ವೀಕ್ಷಣೆ, ವಿದ್ಯಾರ್ಥಿಗಳಿಗೆ ಗಿಡ ವಿತರಣೆ, ಲೇಖನ ಸ್ಪರ್ಧೆ ವಿಜೇತರಿಗೆ ಬಹುಮಾನ, ರೋಟರಿ ಕ್ಲಬ್ ವತಿಯಿಂದ ಕಾಲೇಜಿಗೆ ಸಾವಯವ ಗೊಬ್ಬರ ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಶುಭಾ ಮರವಂತೆ, ಮಲೆನಾಡು ರೋಟರಿ ಕ್ಲಬ್ ಅಧ್ಯಕ್ಷ ಮುಸ್ತಾಖ್ ಅಲಿಷ, ಉಪವಲಯ ಅರಣಾಧಿಕಾರಿ ಪಿ.ಶರತ್‍ಕುಮಾರ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಶಿವಮೂರ್ತಿ, ಐಕ್ಯೂಎಸಿ ಸಂಚಾಲಕಿ ಡಾ.ಕೆ.ಎಸ್.ಸರಳ, ಕಾರ್ಯಾಕ್ರಮಾಧಿಕಾರಿ ಎಂ.ಪರಶುರಾಮ್, ಪ್ರಮುಖರಾದ ಕೆ.ಎಲ್. ಅಶೋಕ್, ಜಿ.ಆರ್.ಲವ , ಪರಿಸರ ನಾಗರಾಜ್, ಗಿರಿಧರ್ ಸೇರಿದಂತೆ ಹಲವರಿದ್ದರು.

Share this article