ರಾಮನಗರದಲ್ಲಿ ಚಾಮುಂಡಿ ಕರಗಕ್ಕೆ ಸಹಸ್ರಾರು ಭಕ್ತರು ಸಾಕ್ಷಿ

KannadaprabhaNewsNetwork | Published : Jul 24, 2024 12:24 AM

ಸಾರಾಂಶ

ರಾಮನಗರದಲ್ಲಿ ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಕರಗ ಮಹೋತ್ಸವಕ್ಕೆ ರಾಜಕೀಯ ಪಕ್ಷಗಳ ನಾಯಕರ ಆದಿಯಾಗಿ ಸಹಸ್ರಾರು ಜನರು ಸಾಕ್ಷಿಯಾದರು. ಕರಗ ಮಹೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಪಾಲ್ಗೊಂಡು ನಾಡಿಗೆ ಒಳಿತಾಗುವಂತೆ ದೇವರಲ್ಲಿ ಪ್ರಾರ್ಥಿಸಿದರು.

-ಸಿಎಂ, ಡಿಸಿಎಂ ದೇವಿಗೆ ವಿಶೇಷ ಪೂಜೆ -ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಭಾಗಿ

-ಗಮನ ಸೆಳೆದ ದೀಪಾಲಂಕಾರಕನ್ನಡಪ್ರಭ ವಾರ್ತೆ ರಾಮನಗರ

ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಕರಗ ಮಹೋತ್ಸವಕ್ಕೆ ರಾಜಕೀಯ ಪಕ್ಷಗಳ ನಾಯಕರ ಆದಿಯಾಗಿ ಸಹಸ್ರಾರು ಜನರು ಸಾಕ್ಷಿಯಾದರು.

ಕರಗ ಮಹೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಪಾಲ್ಗೊಂಡು ನಾಡಿಗೆ ಒಳಿತಾಗುವಂತೆ ದೇವರಲ್ಲಿ ಪ್ರಾರ್ಥಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಇಕ್ಬಾಲ್ ಹುಸೇನ್ ಸೇರಿ ಕಾಂಗ್ರೆಸ್ ನಾಯಕರು ರಾತ್ರಿ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಆನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮ ವೀಕ್ಷಿಸಿದರು. ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬೆಳಿಗ್ಗೆ ನಗರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಹರಿದು ಬಂದ ಜನಸಾಗರ:

ಚಾಮುಂಡೇಶ್ವರಿ ದೇವಿಯ ಉತ್ಸವಕ್ಕೆ ಪಕ್ಕದ ಚನ್ನಪಟ್ಟಣ, ಮಾಗಡಿ, ಕನಕಪುರ, ಬಿಡದಿ ಸೇರಿದಂತೆ ಮಂಡ್ಯ, ಬೆಂಗಳೂರಿನಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಸುತ್ತಮುತ್ತಲಿನ ಗ್ರಾಮಗಳಿಂದ ತಂಬಿಟ್ಟು ಆರತಿ ಹೊತ್ತು ತಂದ ಮಹಿಳೆಯರು ಶ್ರದ್ಧಾಭಕ್ತಿಯಿಂದ ಚಾಮುಂಡೇಶ್ವರಿಗೆ ಆರತಿ ಬೆಳಗಿ, ಪೂಜೆ ಸಲ್ಲಿಸಿದರು. ನಗರದಲ್ಲಿ ಎಂಟು ಕರಗ ಮಹೋತ್ಸವಗಳು ನಡೆದಿದ್ದು, ವಿವಿಧ ಜಿಲ್ಲೆಗಳಲ್ಲಿಂದ ಜನಸಾಗರವೇ ಹರಿದು ಬಂದಿತ್ತು.

ಗಮನ ಸೆಳೆದ ದೀಪಾಲಂಕಾರ:

ಕರಗ ಮಹೋತ್ಸವದ ಪ್ರಯುಕ್ತ ಎಲ್ಲ ಪ್ರಮುಖ ರಸ್ತೆಗಳಲ್ಲಿ, ಬಡಾವಣೆಗಳಲ್ಲಿ ಮತ್ತು ಪ್ರಮುಖ ಕಟ್ಟಡಗಳಿಗೆ ಮಾಡಿದ್ದ ದೀಪಾಲಂಕಾರ, ಹಳೆಯ ಬೆಂಗಳೂರು- ಮೈಸೂರು ಹೆದ್ದಾರಿ, ರೈಲ್ವೆ ನಿಲ್ದಾಣ ರಸ್ತೆ, ಎಂ.ಜಿ ರಸ್ತೆ ಸೇರಿದಂತೆ ಎಲ್ಲ ರಸ್ತೆ, ಬೀದಿಗಳು ವಿದ್ಯುತ್ ಅಲಂಕಾರದಿಂದ ಜಗಮಗಿಸುತ್ತಿತ್ತು.

ಅಗ್ನಿಕೊಂಡದ ಅಂಗವಾಗಿ ನಗರ ಹಾಗೂ ಸುತ್ತಮುತ್ತಲ ಹಳ್ಳಿಗಳ ಭಕ್ತರು ಟ್ರ್ಯಾಕ್ಟರ್, ಎತ್ತಿನ ಗಾಡಿ ಹಾಗೂ ಇತರೆ ವಾಹನಗಳಲ್ಲಿ ಅಗ್ನಿಕೊಂಡಕ್ಕೆ ಕಟ್ಟಿಗೆಗಳ ರಾಶಿ ಹಾಕುವ ಮೂಲಕ ಹರಕೆ ತೀರಿಸಿದರು. ಸಂಜೆ 5 ಗಂಟೆ ಸಮಯಕ್ಕೆ ಉರುವಲನ್ನು ಅಗ್ನಿಕೊಂಡದಲ್ಲಿ ಜೋಡಿಸಿ ಅಗ್ನಿ ಸ್ಪರ್ಶ ಮಾಡಲಾಯಿತು. ಬುಧವಾರ ಬೆಳಿಗ್ಗೆ 7 ಗಂಟೆಗೆ ಕರಗವು ಅಗ್ನಿಕೊಂಡ ಪ್ರವೇಶಿಸಲಿದೆ.

ನಗರದ ಹೊರ ವಲಯದಲ್ಲಿರುವ ಸಿಂಗ್ರಾಬೋವಿ ದೊಡ್ಡಿಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಿಂದ ಹೊರಡುವ ಕರಗ, ದ್ಯಾವರಸೇಗೌಡನದೊಡ್ಡಿ, ಚಾಮುಂಡಿಪುರ, ಅಂಚೇಕೆಂಪೇಗೌಡನದೊಡ್ಡಿ, ಪೊಲೀಸ್ ಕ್ವಾಟ್ರಸ್ , ಶೆಟ್ಟಿಹಳ್ಳಿ, ಕುಂಬಾರ ಬೀದಿ, ಬಲಿಜಿಗರ ಬೀದಿ, ಗಾಂಧಿನಗರ, ಕಾಯಿಸೊಷ್ಪಿನ ಬೀದಿ ಮೂಲಕ ಸಾಗಲಿದೆ.

ಮನ ರಂಜಿಸಿದ ಸಂಗೀತ ರಸ ಸಂಜೆ:

ರಾಮನಗರ: ಚಾಮುಂಡೇಶ್ವರಿ ದೇವಿ ಕರಗ ಮಹೋತ್ಸವ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನರ ಮನ ರಂಜಿಸಿತು. ಆಗಾಗ್ಗೆ ಜಿನುಗುತ್ತಿದ್ದ ತುಂತುರು ಮಳೆಯ ನಡುವೆಯೂ ಕ್ರೀಡಾಂಗಣದ ಬೃಹತ್ ವೇದಿಕೆಯಲ್ಲಿ ವಾದ್ಯಗೋಷ್ಠಿ, ಗಾಯನ, ನೃತ್ಯ ಕಾರ್ಯಕ್ರಮಗಳು ತಡರಾತ್ರಿವರೆಗೂ ಜರುಗಿದವು.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನೇತೃತ್ವದಲ್ಲಿ ಸಂಗೀತ ರಸಸಂಜೆ ಜತೆಗೆ ಹೆಸರಾಂತ ಗಾಯಕ-ಗಾಯಕಿಯರು ಗಾನಸುಧೆ ಹರಿಸಿದರು. ಬಾಣ ಬಿರುಸುಗಳ ಪ್ರದರ್ಶನವೂ ನಡೆಯಿತು. ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ಆಟಿಕೆಗಳ ಅಳವಡಿಸಲಾಗಿತ್ತು. ಜತೆಗೆ ತಿಂಡಿ ತಿನಿಸು ಸವಿದು ಬಾಯಿ ಚಪ್ಪರಿಸಿದರು.

Share this article